ಹುಬ್ಬಳ್ಳಿ: ಹೃದಯಕ್ಕೆ ಸಂಬಂಧಿಸಿದ ಕಾಯಿಲೆಗೆ ಆಂಜಿಯೋಪ್ಲಾಸ್ಟಿ ಯಶಸ್ವಿ ಚಿಕಿತ್ಸೆ ನೀಡುವ ಮೂಲಕ ಬಾಲಾಜಿ ನರ ರೋಗ ಮತ್ತು ಅಪಘಾತ ಚಿಕಿತ್ಸಾ ಸಂಸ್ಥೆ ಇಂಗ್ಲೆಂಡ್ ಮೂಲದ ವ್ಯಕ್ತಿಗೆ ಮರುಜೀವ ನೀಡಿದೆ ಎಂದು ಸಂಸ್ಥೆಯ ಅಧ್ಯಕ್ಷ ಡಾ. ಕ್ರಾಂತಿ ಕಿರಣ ಹೇಳಿದರು.
ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರವಾಸದ ಹಿನ್ನೆಲೆಯಲ್ಲಿ ಇಂಗ್ಲೆಂಡ್ ದೇಶದಿಂದ ಗೋವಾಕ್ಕೆ ಆಗಮಿಸಿದ್ದ ಲಿವೋನಾಡ್ ಎಂಬ ವ್ಯಕ್ತಿಗೆ ತೀವ್ರವಾಗಿ ಹೃದಯ ಸಮಸ್ಯೆ ಕಾಣಿಸಿತ್ತು. ತುರ್ತು ಹಾಗೂ ಪರಿಣಾಮಕಾರಿ ಚಿಕಿತ್ಸೆ ಅನಿವಾರ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ಬಾಲಾಜಿ ನರರೋಗ ಮತ್ತು ಅಪಘಾತ ಚಿಕಿತ್ಸಾ ಸಂಸ್ಥೆಗೆ ಆತನನ್ನ ದಾಖಲಿಸಲಾಗಿತ್ತು. ಈಗ ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ನೀಡುವ ಮೂಲಕ ಇಂಗ್ಲೆಂಡ್ ಪ್ರವಾಸಿಗನಿಗೆ ಮರು ಜೀವ ನೀಡಿದೆ ಎಂದರು.
ಜನವರಿ 29 ರಂದು ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಸತತ ಒಂದು ಗಂಟೆ ಕಾಲ ಶಸ್ತ್ರ ಚಿಕಿತ್ಸೆ ಮಾಡಿ ಹೃದಯದ ಎರಡು ಮುಖ್ಯ ರಕ್ತನಾಳದಲ್ಲಿ ಆಂಜಿಯೋಪ್ಲಾಸ್ಟಿ ಮೂಲಕ ಸ್ಟಂಟ್ ಅಳವಡಿಸಲಾಗಿದೆ. ಈಗ ಆತ ಸಂಪೂರ್ಣ ಗುಣಮುಖನಾಗಿದ್ದಾನೆ ಎಂದರು. ಎರಡು ರಕ್ತನಾಳ ಸಂಪೂರ್ಣ ಬ್ಲಾಕ್ ಆಗಿದ್ದವು. ಡಾ.ನಿತಿನ್ ಕಡಕೋಳ ಮತ್ತು ಸುರೇಶ್ ಹೆಚ್ ನೇತೃತ್ವದ ವೈದ್ಯರ ತಂಡ ಮರು ಜೀವ ನೀಡಿದ್ದಾರೆ ಎಂದು ಹೇಳಿದರು.
ಇದೇ ವೇಳೆ ಮಾತನಾಡಿದ ವಿದೇಶಿ ಪ್ರವಾಸಿಗ ಲಿವೋನಾಡ್, ವಿದೇಶಕ್ಕೆ ಹೋಲಿಸಿದ್ರೆ ಹುಬ್ಬಳ್ಳಿಯಲ್ಲಿ ಸಿಗುವ ವೈದ್ಯಕೀಯ ಸೌಲಭ್ಯ ಯಾವುದರಲ್ಲಿಯೂ ಕಡಿಮೆ ಇಲ್ಲ. ಇಲ್ಲಿನ ವೈದ್ಯರು ತುಂಬಾ ಪರಿಣಿತರಾಗಿದ್ದಾರೆ. ನನಗೆ ಹೃದಯ ಚಿಕಿತ್ಸೆ ನೀಡಿ ಮರು ಜೀವನ ನೀಡಿದ್ದಾರೆ ಎಂದರು.