ಹುಬ್ಬಳ್ಳಿ: ಇಷ್ಟು ದಿನ ರಸ್ತೆ ಗುಂಡಿಗಳಿಂದ ಬೇಸತ್ತಿದ್ದ ಹು-ಧಾ ಮಹಾನಗರದ ಜನರ ಸಮಸ್ಯೆಗೆ ಸ್ಪಂದಿಸಲು ಮಹಾನಗರ ಪಾಲಿಕೆ ಮುಂದಾಗಿದೆ. ಅವಳಿ ನಗರಗಳಲ್ಲಿ ಗುಂಡಿಗಳನ್ನು ಮುಚ್ಚುವ ಕೆಲಸವನ್ನು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಶೀಘ್ರದಲ್ಲೇ ಕೈಗೆತ್ತಿಕೊಳ್ಳಲಿದೆ.
ನಿರಂತರ ಮುಂಗಾರು ಮಳೆಯಿಂದಾಗಿ ಹುಬ್ಬಳ್ಳಿ - ಧಾರವಾಡದಲ್ಲಿ ರಸ್ತೆಗಳು ತೀವ್ರ ಹಾನಿಗೀಡಾಗಿದ್ದು, ರಸ್ತೆಗಳ ದುಸ್ಥಿತಿಯನ್ನು ಖಂಡಿಸಿ ವಿವಿಧ ರಾಜಕೀಯ ಪಕ್ಷಗಳು ಮತ್ತು ಸಾರ್ವಜನಿಕರು ಪ್ರತಿಭಟನೆ ನಡೆಸಿದ್ದರು.
ರಸ್ತೆಗಳ ವಿಷಾದಕರ ಸ್ಥಿತಿಯನ್ನು ಅಪಹಾಸ್ಯ ಮಾಡಲು ಜನರು ಕೆಲವೊಂದು ವ್ಯಂಗ್ಯ ಚಿತ್ರಗಳನ್ನು ತಯಾರಿಸಿದ್ದರು ಮತ್ತು ಅವುಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರ ಮಾಡಿದ್ದರು.
ಈ ಹಿನ್ನೆಲೆ ಹೆಚ್‌ಡಿಎಂಸಿ ರಸ್ತೆಗಳನ್ನು ಸರಿಪಡಿಸಲು ಚಿಂತನೆ ನಡೆಸಿತ್ತು. ಆದರೆ ನಿರಂತರ ಮಳೆಯಿಂದಾಗಿ ಕೆಲಸ ಪ್ರಾರಂಭವಾಗಿರಲಿಲ್ಲ. ಇತ್ತೀಚಿನ ದಿನಗಳಲ್ಲಿ ಮಳೆ ಸ್ವಲ್ಪ ನಿಯಂತ್ರಣಕ್ಕೆ ಬಂದಿದ್ದು, ಗುಂಡಿಗಳನ್ನು ಮುಚ್ಚುವ ಕೆಲಸ ಪ್ರಾರಂಭವಾಗಲಿದೆ.
ಹೆಚ್‌ಡಿಎಂಸಿ ಮೂಲಗಳ ಪ್ರಕಾರ, ಪಾಲಿಕೆ ವಲಯ ಕಚೇರಿಗಳಿಂದ ಹಾನಿಗೊಳಗಾದ ರಸ್ತೆಗಳ ಸಮೀಕ್ಷೆ ನಡೆಸಲಾಗಿದ್ದು, ಗುಂಡಿಗಳನ್ನು ಮುಚ್ಚಲು ಹೆಚ್‌ಡಿಎಂಸಿಯ ಸಾಮಾನ್ಯ ಅನುದಾನದಿಂದ ಸುಮಾರು 3 ಕೋಟಿ ರೂ. ಹಾಗೂ ತೀವ್ರ ಹಾನಿಗೊಳಗಾದ ಕೆಲವು ರಸ್ತೆಗಳನ್ನು ಪುನರ್ ನಿರ್ಮಾಣ ಮಾಡಬೇಕಾಗಿದೆ. ಆದ್ದರಿಂದ 20 ಕೋಟಿ ರೂಪಾಯಿ ಖರ್ಚು ಮಾಡುವ ಮೂಲಕ ರಸ್ತೆ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು. 15ನೇ ಹಣಕಾಸು ಆಯೋಗ ಮತ್ತು ಮಹಾತ್ಮ ಗಾಂಧಿ ವಿಕಾಸ್ ಯೋಜನೆಯಡಿ ಅನುದಾನವನ್ನು ಇದಕ್ಕಾಗಿ ಬಳಸಿಕೊಳ್ಳಲಾಗುವುದು ಎಂದು ಪಾಲಿಕೆ ಆಯುಕ್ತರು ಮಾಹಿತಿ ನೀಡಿದ್ದಾರೆ.