ಹುಬ್ಬಳ್ಳಿ: ಸ್ವಚ್ಛ ನಗರ ನಿರ್ಮಾಣಕ್ಕಾಗಿ ಘನತ್ಯಾಜ್ಯ ನಿರ್ವಹಣೆಗಾಗಿ ಈಗಾಗಲೇ ಹಲವು ಕ್ರಮಗಳನ್ನು ಕೈಗೊಂಡಿರುವ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ, ಕಸ ಸಂಗ್ರಹಕ್ಕಾಗಿ ಮತ್ತೆ 25 ಆಟೋ ಟಿಪ್ಪರ್‌ಗಳನ್ನು ಖರೀದಿಸಲು ಮುಂದಾಗಿದೆ.
ಸಾವಿರ ಮನೆಗಳಿಂದ ಕಸ ಸಂಗ್ರಹಿಸಲು ಒಂದು ಆಟೋ ಟಿಪ್ಪರ್ ಎಂಬ ನಿಯಮದಂತೆ ಪಾಲಿಕೆಯು ಕಸ ಸಂಗ್ರಹ ವಾಹನಗಳ ಸಂಖ್ಯೆಯನ್ನು ಹೆಚ್ಚಿಸಿಕೊಂಡು ಬರುತ್ತಿದೆ. ಸದ್ಯ ಹೊಸ ವಾಹನಗಳನ್ನು 14ನೇ ಹಣಕಾಸು ಯೋಜನೆಯಡಿ 3.80 ಕೋಟಿ ವೆಚ್ಚದಲ್ಲಿ ಖರೀದಿ ಮಾಡಲಾಗುತ್ತಿದೆ. ಪಾಲಿಕೆಯ ಬಳಿ 191 ಆಟೋ ಟಿಪ್ಪರ್‌ಗಳಿದ್ದು, ಹೊಸ ವಾಹನಗಳು ಬಂದರೆ ಈ ಸಂಖ್ಯೆ 216ಕ್ಕೆ ಏರಿಕೆಯಾಗಲಿದೆ.
2016-17ರ ಅಂದಾಜಿನ ಪ್ರಕಾರ ಪಾಲಿಕೆ ವ್ಯಾಪ್ತಿಯಲ್ಲಿ ಅಂದಾಜು 1.86 ಲಕ್ಷ ಮನೆ ಮತ್ತು ವಾಣಿಜ್ಯ ಕಟ್ಟಡಗಳು ಇದ್ದವು. ಈಗ ಅದು ಸುಮಾರು 2.25 ಲಕ್ಷಕ್ಕೆ ಏರಿಕೆಯಾಗಿದೆ ಎಂದು ಅಂದಾಜು ಮಾಡಲಾಗಿದೆ. ಮನೆ, ವಸತಿ ಸಂಕೀರ್ಣ ಹಾಗೂ ವಾಣಿಜ್ಯ ಕಟ್ಟಡಗಳು ಹೆಚ್ಚುತ್ತಿರುವುದರಿಂದ ಕಸ ಸಂಗ್ರಹಕ್ಕೆ ಹೊಸದಾಗಿ 25 ಆಟೋ ಟಿಪ್ಪರ್ ಖರೀದಿಗೆ ಮಹಾನಗರ ಪಾಲಿಕೆ ಮುಂದಾಗಿದೆ.
ಓದಿ: ಧಾರವಾಡ: ಕೃಷಿ ಕಾಯ್ದೆ ವಿರೋಧಿಸಿ ನಾಳೆ ಬೈಪಾಸ್ ರಸ್ತೆ ತಡೆ
ನಮ್ಮ ಅಪಾಟ್ಮೆಂಟ್ಗಳಿಗೆ ಸರಿಯಾಗಿ ಕಸ ವಿಲೇವಾರಿ ವಾಹನ ಬರುತ್ತಿಲ್ಲ ಎನ್ನುವ ದೂರುಗಳನ್ನು ದೂರ ಮಾಡಲು ಪಾಲಿಕೆ ಈ ನಿರ್ಧಾರ ಕೈಗೊಂಡಿದೆ. ಈಗ ಮಹಾನಗರ ಪಾಲಿಕೆಗೆ 25 ಆಟೋ ಟಿಪ್ಪರ್ ಖರೀದಿಯಿಂದ ಮತ್ತಷ್ಟು ಕಾರ್ಯಕ್ಷಮತೆ ಹೆಚ್ಚಲಿದೆ.