ಹುಬ್ಬಳ್ಳಿ: ವಾಣಿಜ್ಯ ನಗರಿ ಹುಬ್ಬಳ್ಳಿ ಹಾಗೂ ವಿದ್ಯಾನಗರಿ ಧಾರವಾಡದಲ್ಲಿ ದಿನ ಬಳಕೆ ವಸ್ತುಗಳ ಬೆಲೆ ಗಗನಕ್ಕೇರಿದೆ. ಇದರ ನಡುವೆಯೇ ಮಹಾನಗರ ಪಾಲಿಕೆ ಆಸ್ತಿ ತೆರಿಗೆ ಏರಿಕೆ ಮಾಡಲು ಮುಂದಾಗಿದೆ. ಮುಂಬರುವ ಆರ್ಥಿಕ ವರ್ಷಕ್ಕೆ ಅನ್ವಯವಾಗುವಂತೆ ಆಸ್ತಿ ತೆರಿಗೆ ದರವನ್ನು ಪ್ರತಿ ವರ್ಷದಂತೆ ಪರಿಷ್ಕರಣೆ ಮಾಡುವುದು ಸಾಮಾನ್ಯ ಪ್ರಕ್ರಿಯೆ. ಆದರೆ, ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆಯು ಚಾಲ್ತಿಯಲ್ಲಿರುವ 2023-24ನೇ ಸಾಲಿಗೆ ಅನ್ವಯವಾಗುವಂತೆ ಆಸ್ತಿ ತೆರಿಗೆ ದರ ಏರಿಕೆಗೆ ಮುಂದಾಗಿದೆ.
ಪ್ರಸಕ್ತ ಆರ್ಥಿಕ ವರ್ಷವು 3ನೇ ತ್ರೈಮಾಸಿಕದಲ್ಲಿದೆ (ಅಕ್ಟೋಬರ್ - ಡಿಸೆಂಬರ್). ಈಗಾಗಲೇ ಹುಬ್ಬಳ್ಳಿ-ಧಾರವಾಡ ಅವಳಿ ನಗರದ ಶೇ. 70ರಿಂದ 75ರಷ್ಟು ಆಸ್ತಿ ಮಾಲೀಕರು ಆಸ್ತಿ ತೆರಿಗೆ ಪಾವತಿಸಿದ್ದಾರೆ. ಅಕ್ಟೋಬರ್ 31ರವರೆಗೆ ಆಸ್ತಿ ತೆರಿಗೆ ರೂಪದಲ್ಲಿ ಪಾಲಿಕೆಗೆ 87.34 ಕೋಟಿ ರೂ. ಸಂದಾಯವಾಗಿದೆ. ಹೀಗಿರುವಾಗ ಆರ್ಥಿಕ ವರ್ಷದ ಕೊನೆಯ ಅವಧಿಯಲ್ಲಿ ಆಸ್ತಿ ತೆರಿಗೆ ದರ ಏರಿಕೆಗೆ ಮುಂದಾಗಿದೆ.
ಇನ್ನು 2022-23ರಲ್ಲಿ ಚಾಲ್ತಿಯಲ್ಲಿದ್ದ ಆಸ್ತಿ ತೆರಿಗೆಯ ಮೇಲೆ 2023ರ ಏಪ್ರಿಲ್ 1ರಿಂದ ಅನ್ವಯವಾಗುವಂತೆ (2023-24ನೇ ಸಾಲಿಗೆ) ಶೇ. 5ರಷ್ಟು ಏರಿಕೆ ನಿಗದಿಪಡಿಸಲಾಗಿದೆ. ಅಂದರೆ, ಈಗಾಗಲೇ ಪ್ರಸಕ್ತ ವರ್ಷಕ್ಕೆ ಆಸ್ತಿ ತೆರಿಗೆ ಪಾವತಿಸಿದವರು ಹೆಚ್ಚುವರಿಯಾದ ಶೇ. 5ರಷ್ಟು ಏರಿಕೆಯನ್ನು 2024-25ರ ಆಸ್ತಿ ತೆರಿಗೆ ಪಾವತಿಯೊಂದಿಗೆ ಸಂದಾಯ ಮಾಡಬೇಕಾಗುತ್ತದೆ. ರಾಜ್ಯ ಸರ್ಕಾರದ ಅಧಿಸೂಚನೆ ಅನ್ವಯ ಪ್ರತಿ ಆರ್ಥಿಕ ವರ್ಷಕ್ಕೆ ಶೇ. 3ರಿಂದ 5ರವರೆಗೆ ಏರಿಕೆ ಮಾಡಲು ಪಾಲಿಕೆಗೆ ಅಧಿಕಾರವಿದೆ. 2022-23ನೇ ಸಾಲಿನಲ್ಲಿ ಶೇ. 3ರಷ್ಟು ಏರಿಕೆ ಮಾಡಲಾಗಿತ್ತು. 2023-24ನೇ ಸಾಲಿಗೆ ವಾಸ, ವಾಣಿಜ್ಯ, ವಾಸೇತರ ಮತ್ತು ವಾಣಿಜ್ಯೇತರ ಹಾಗೂ ಎಲ್ಲ ಸ್ವರೂಪದ ಖುಲ್ಲಾ ಜಾಗಗಳಿಗೆ ಶೇ. 5ರಷ್ಟು ಏರಿಕೆಯ ಪ್ರಸ್ತಾವನೆಯನ್ನು ಪಾಲಿಕೆ ಸಿದ್ಧಪಡಿಸಿದೆ.
ಈ ಬಗ್ಗೆ ಹು-ಧಾ ಮಹಾನಗರ ಪಾಲಿಕೆ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ ಮಾಹಿತಿ ನೀಡಿ, ಸರ್ಕಾರದ ಅಧಿಸೂಚನೆಯಂತೆ ಈ ವರ್ಷ ಶೇ 3-5 ರವರೆಗೆ ಆಸ್ತಿ ತೆರಿಗೆ ಏರಿಕೆ ಪ್ರಸ್ತಾವನೆಯನ್ನು ಮಹಾನಗರ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಇಡಲಾಗಿದೆ. ಫೈನಾನ್ಸ್ ಕಮಿಟಿ ಮುಖಾಂತರ ಕೆಲವು ತಿದ್ದುಪಡಿ ಮಾಡಿಕೊಡಲು ಕಳುಹಿಸಲಾಗಿದೆ. ಶೇ. 5 ಏರಿಕೆ ಮಾಡಲು ಚರ್ಚೆಯಾಗಿದ್ದು, ಮುಂದೆ ನಡೆಯುವ ಮಹಾನಗರ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ಮುಂದಿನ ಕ್ರಮ ತೆಗೆದುಕೊಳ್ಳಲು ನಿರ್ಧರಿಸಲಾಗಿದೆ ಎಂದು ಮಾಹಿತಿ ನೀಡಿದರು.
ಮಹಾನಗರ ಪಾಲಿಕೆ ಅವಳಿನಗರದ ಅಭಿವೃದ್ಧಿಗಾಗಿ ತೆರಿಗೆ ಸಂಗ್ರಹ ಅವಶ್ಯವಾಗಿದೆ. ತೆರಿಗೆದಾರರಿಗೆ ಮಹಾನಗರ ಪಾಲಿಕೆ ಸಾಕಷ್ಟು ಸೌಲಭ್ಯಗಳನ್ನು ನೀಡಲಿದೆ. ಸಾರ್ವಜನಿಕರು ಕೂಡ ಸಮಯಕ್ಕೆ ಸರಿಯಾಗಿ ತೆರಿಗೆ ಕಟ್ಟುವುದರ ಮೂಲಕ ನಗರದ ಮೂಲಭೂತ ಸೌಲಭ್ಯ ಕಲ್ಪಿಸಲು ಸಾಧ್ಯವಾಗಿದೆ ಎಂದು ತಿಳಿಸಿದರು.
ಇದನ್ನೂ ಓದಿ: ಈ ಅಧಿವೇಶನ ಪೂರ್ತಿ ಜನರ ಮೇಲೆ ತೆರಿಗೆ ಹಾಕುವ ಅಧಿವೇಶನವಾಗಿದೆ: ಆರ್. ಅಶೋಕ್