ಹುಬ್ಬಳ್ಳಿ: ಇಲ್ಲಿನ ರೈಲು ನಿಲ್ದಾಣದಲ್ಲಿ ಬಾಂಬ್ ಸ್ಪೋಟಗೊಂಡು ಇಂದಿಗೆ ಒಂದು ವರ್ಷ ಕಳೆದಿದೆ. ಆದ್ರೆ ಈವರೆಗೂ ಪೊಲೀಸರಿಗೆ ಆರೋಪಿಗಳನ್ನು ಬಂಧಿಸಲು ಸಾಧ್ಯವಾಗಿಲ್ಲ.
ಅ. 21, 2019 ರಲ್ಲಿ ಹುಬ್ಬಳ್ಳಿ ರೈಲ್ವೆ ನಿಲ್ದಾಣ ಅಕ್ಷರಶ: ನಡುಗಿ ಹೋಗಿತ್ತು. ಆ ಒಂದು ಸ್ಪೋಟ ಜನರಲ್ಲಿ ಭಯ ಸೃಷ್ಠಿಸಿತ್ತು. ಹುಬ್ಬಳ್ಳಿಗೆ ಬಂದಿದ್ದ ಅಮರಾವತಿ-ವಿಜಯವಾಡ ಎಕ್ಸ್‌ಪ್ರೆಸ್ ರೈಲಿನಲ್ಲಿ ಸ್ಫೋಟಕ ತುಂಬಿದ್ದ ಬಾಕ್ಸ್ಗಳಿದ್ದವು. ಈ ಬಾಕ್ಸ್‌ಗಳ ಪೈಕಿ ಒಂದನ್ನು ತೆರೆಯುತ್ತಿದ್ದಂತೆ ರೈಲ್ವೆ ನಿಲ್ದಾಣದಲ್ಲಿ ದೊಡ್ಡ ಶಬ್ದದೊಂದಿಗೆ ಘಟನೆ ಸಂಭವಿಸಿದೆ.
ಈ ಬಾಕ್ಸ್ ಮೇಲೆ ಕೊಲ್ಲಾಪುರ ಶಾಸಕರ ಹೆಸರಿದ್ದು, ಅವರ ವಿಚಾರಣೆಯೂ ನಡೆದಿಲ್ಲ. ಆತಂಕದ ವಿಚಾರ ಅಂದ್ರೆ, ಹುಬ್ಬಳ್ಳಿ ಸ್ಫೋಟಕ್ಕೂ ಎರಡು ದಿನ ಮೊದಲು ಕೊಲ್ಲಾಪುರದಲ್ಲಿಯೂ ಇದೇ ಮಾದರಿಯಲ್ಲಿ ಸ್ಫೋಟ ನಡೆದಿದೆ. ಸ್ಫೋಟಕದ ಮಾದರಿಗಳನ್ನು ಸಂಗ್ರಹಿಸಿರುವ ಎಸ್‌ಎಫ್‌ಎಲ್ ತಂಡ ಕೂಡ ಇದುವರೆಗೆ ವರದಿ ನೀಡಿಲ್ಲ.
ಪ್ರಕರಣವನ್ನು ರಾಜ್ಯ ಹಾಗೂ ರೈಲ್ವೆ ಪೊಲೀಸರು ಗಂಭೀರವಾಗಿ ಪರಿಗಣಿಸಿಲ್ಲ ಎಂದು ಜನರು ದೂರುತ್ತಿದ್ದಾರೆ. ರೈಲ್ವೆ ಹಾಗೂ ರಾಜ್ಯ ಪೊಲೀಸರ ನಡುವಿನ ಸಮನ್ವಯದ ಕೊರತೆ ಪ್ರಕರಣ ಹಳ್ಳ ಹಿಡಿಯಲು ಕಾರಣ ಎನ್ನಲಾಗುತ್ತಿದೆ.