ಹುಬ್ಬಳ್ಳಿ: ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಗೆ ದಿನ ಗಣನೆ ಆರಂಭವಾಗಿದೆ. ಇತ್ತ ಹುಬ್ಬಳ್ಳಿಯಲ್ಲಿ ಪ್ರತಿ ಮನೆ ಮನೆಗಳಲ್ಲಿ ದೀಪ ಬೆಳಗಿಸಲು ದೀಪ ತಯಾರಿಕೆಯ ಕಾರ್ಯ ಭರ್ಜರಿಯಾಗಿ ನಡೆದಿದೆ. ರಾಮಜನ್ಮಭೂಮಿ ಅಯೋಧ್ಯೆಯಲ್ಲಿ ಪ್ರತಿದಿನ ಕಾರ್ತಕ್ರಮಗಳು ಜರುಗುತ್ತಿವೆ. ಪ್ರಧಾನಿ ನರೇಂದ್ರ ಮೋದಿ ಕೂಡ ರಾಮಮಂದಿರ ಉದ್ಘಾಟನೆಯನ್ನು ದೇಶದ ಪ್ರತಿಯೊಬ್ಬರು ದೀಪಾವಳಿ ಹಬ್ಬದಂತೆ ಆಚರಿಸಲು ಕರೆ ಕೊಟ್ಟಿದ್ದು, ಅಂದು ಪ್ರತಿ ಮನೆಯಲ್ಲಿ ದೀಪಗಳನ್ನು ಹಚ್ಚಲು ತಿಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಹುಬ್ಬಳ್ಳಿಯ ವಿಶ್ವ ಹಿಂದೂ ಪರಿಷತ್ ಕರ್ನಾಟಕ ಉತ್ತರ ಟ್ರಸ್ಟ್ನ ಗೋ ಸೇವಾ ಕೇಂದ್ರ ಸಗಣಿಯಿಂದ ಹಣತೆ ತಯಾರಿಸುವಲ್ಲಿ ನಿರತವಾಗಿದೆ. ಇಲ್ಲಿನ ಆನಂದ ನಗರದಲ್ಲಿನ ವಿಶ್ವ ಹಿಂದೂ ಪರಿಷತ್ ಕರ್ನಾಟಕ ಉತ್ತರ ಟ್ರಸ್ಟ್ನ ಗೋ ಸೇವಾ ಕೇಂದ್ರದಲ್ಲಿ ಜ.22 ರಂದು ಪ್ರತಿ ಮನೆಯಲ್ಲಿ ಹಣತೆ ಹಚ್ಚಲು ಕಳೆದ ಎರಡು ವಾರದಿಂದ ಸಗಣಿಯ ಹಣತೆ ತಯಾರಿಸಲಾಗುತ್ತಿದೆ.
ಹಿಂದೂ ಧರ್ಮದಲ್ಲಿ ಗೋ ಮೂತ್ರ, ಸಗಣಿಗೆ ಪವಿತ್ರವಾದ ಸ್ಥಾನವಿದ್ದು, ಸಾರ್ವಜನಿಕರು ಸಗಣಿಯಿಂದ ತಯಾರಿಸಿದ ಹಣತೆ ಬೆಳಗಿಸುವ ಮೂಲಕ ಅಯೋಧ್ಯೆಯ ರಾಮಮಂದಿರ ಉದ್ಘಾಟನೆಯನ್ನು ವಿಭಿನ್ನವಾಗಿ ಆಚರಿಸಲಿ ಹಾಗೂ ಗೋ ಮಾತೆಯ ಮಹತ್ವ ಅರಿಯಲಿ ಎಂಬ ಉದ್ದೇಶದಿಂದ ಈ ಕಾರ್ಯ ಮಾಡುತ್ತಿದ್ದು, 108 ಹಣತೆಗಳನ್ನು ಅಯೋಧ್ಯೆಗೆ ಕಳುಹಿಸುವ ಯೋಜನೆ ಕೂಡ ಹಮ್ಮಿಕೊಂಡಿದೆ.
ಕೇಂದ್ರದ ಸದಸ್ಯರಾದ, ಶಶಿಕಾಂತ, ಶ್ವೇತಾ ಪತ್ತಾರ, ರಮೇಶ ರೇವಣಕರ, ನಾಗರಾಜ ಹಾಳೇರ ಹಾಗೂ ಯಲ್ಲಪ್ಪ ಗಾಣಗೇರ ಅವರ ನೇತೃತ್ವದಲ್ಲಿ ಪ್ರತಿದಿನ 400 ಕ್ಕೂ ಹೆಚ್ಚು ಹಣತೆ ತಯಾರಿಸುತ್ತಿದ್ದು, ಜ. 22 ರೊಳಗೆ 10 ಸಾವಿರ ಹಣತೆಗಳನ್ನು ತಯಾರಿಸುವ ಗುರಿ ಹೊಂದಿದೆ. ಒಂದು ಮನೆಗೆ ಐದು ಹಣತೆ ತಲುಪಿಸಲಾಗುತ್ತಿದೆ. ಈ ಮೂಲಕ ನಾವು ಕೂಡ ಅಳಿಲು ಸೇವೆ ಸಲ್ಲಿಸುವ ಸೌಭಾಗ್ಯ ಸಿಕ್ಕಂತಾಗಿದೆ ಆನಂದ ಸಂಗಮ್ ಹೇಳಿದರು.
ಗೋ ಶಾಲೆ ಸಿಬ್ಬಂದಿ ನಾಗರಾಜ್ ಪ್ರತಿಕ್ರಿಯೆ ನೀಡಿ, "ಗೋವುಗಳ ಹಸಿ ಸೆಗಣಿಯಲ್ಲಿ ಒಣಗಿಸಿ ಮಿಕ್ಸರಲ್ಲಿ ಪುಡಿ ಮಾಡಿ ಹುತ್ತದ ಮಣ್ಣು ಹಾಗೂ ಒಂದು ವಿಧವಾದ ಪೌಡರ್ ಬಳಸಿ ಅಚ್ಚಿನ ಮೂಲಕ ತಯಾರಿಸುತ್ತೇವೆ. ಆರೇಳು ಜನ ಸೇರಿ ಐದಾರು ನೂರು ಹಣತೆ ತಯಾರಿಸುತ್ತೇವೆ. ಜನರು ಬಂದು ತೆಗೆದುಕೊಂಡು ಹೋಗುತ್ತಿದ್ದಾರೆ. ಮಣ್ಣಿನ ಹಣತೆಗಿಂತಲೂ ಈ ಹಣತೆ ಉತ್ತಮ" ಎಂದರು.
ಒಟ್ಟಿನಲ್ಲಿ ಅಯೋಧ್ಯೆಯಲ್ಲಿ ಶ್ರೀರಾಮ ಮೂರ್ತಿ ಪ್ರತಿಷ್ಠಾಪನೆಗೆ ದೇಶದ ಜನತೆ ವಿವಿಧ ರೀತಿಯಲ್ಲಿ ಸೇವಾ ಕಾರ್ಯದಲ್ಲಿ ತೊಡಗಿದ್ದು, ಅದರಂತೆ ಹುಬ್ಬಳ್ಳಿಯಲ್ಲಿಯೂ ಕೂಡ ವಿಶ್ವ ಹಿಂದೂ ಪರಿಷತ್ ತನ್ನ ಗೋ ಸೇವಾ ಕೇಂದ್ರದ ಮೂಲಕ ಹಣತೆ ತಯಾರಿಸುವ ಮೂಲಕ ಶ್ರೀರಾಮನಿಗೆ ಭಕ್ತಿಯ ಸಮರ್ಪಿಸುವ ಕಾರ್ಯ ಮಾಡಲಾಗುತ್ತಿದೆ.
ಇದನ್ನೂ ಓದಿ: ಜೈಲಿನಲ್ಲಿರುವ ಕೈದಿಗಳಿಗೆ ಅಯೋಧ್ಯೆ ಮಂತ್ರಾಕ್ಷತೆ, ಜಪ ಮಾಲೆ ವಿತರಣೆ