ಹುಬ್ಬಳ್ಳಿ : ಹು-ಧಾ ಅವಳಿನಗರದ ರಸ್ತೆಯ ಅವ್ಯವಸ್ಥೆಯಿಂದ ಬೇಸತ್ತು ಮಹಾನಗರ ಪಾಲಿಕೆಗೆ ಹಲವಾರು ಭಾರಿ ಮನವಿ ಮಾಡಿದರೂ ರಸ್ತೆ ದುರಸ್ತಿ ಬಗ್ಗೆ ಯಾವುದೇ ಕ್ರಮ ಜರುಗಿಸದ ಹಿನ್ನೆಲೆ ಕರ್ನಾಟಕ ಕ್ಷತ್ರಿಯ ಒಕ್ಕೂಟ ಸ್ವಯಂಪ್ರೇರಿತರಾಗಿ ರಸ್ತೆ ಗುಂಡಿಗಳನ್ನು ಮುಚ್ಚುವ ಮೂಲಕ ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಯಿತು.
ನಗರದ ಮ್ಯಾದಾರ ಓಣಿಯಲ್ಲಿರುವ ಗುಂಡಿಗಳನ್ನು ಮುಚ್ಚುವ ಕಾರ್ಯಕ್ಕೆ ಕ್ಷತ್ರಿಯ ಒಕ್ಕೂಟದ ಕಾರ್ಯಕರ್ತರು ಮುಂದಾಗಿದ್ದು, ಕಲ್ಲು ಮಣ್ಣು ಹಾಕುವ ಮೂಲಕ ಗುಂಡಿಗಳನ್ನು ಮುಚ್ಚಿದರು. ಈ ಮೂಲಕ ಮಹಾನಗರ ಪಾಲಿಕೆ ನಿರ್ಲಕ್ಷ್ಯವನ್ನು ಎತ್ತಿತೋರಿಸಿದರು.
ಮಹಾನಗರ ಪಾಲಿಕೆಗೆ ರಸ್ತೆ ದುರಸ್ತಿ ಬಗ್ಗೆ ಹಲವಾರು ಭಾರಿ ಮನವಿ ಮಾಡಿದ್ದೇವೆ ಆದರೆ, ಯಾವುದೇ ಪ್ರಯೋಜನವಾಗಿಲ್ಲ. ಇಂದು ಮತ್ತು ನಾಡಿದ್ದು, ಗಣಪತಿ ವಿಸರ್ಜನೆ ಹಿನ್ನೆಲೆಯಲ್ಲಿ ರಸ್ತೆಯ ಗುಂಡಿಗಳಿಂದ ತೊಂದರೆಯಾಗುತ್ತಿತ್ತು. ಅದಕ್ಕಾಗಿ ಗುಂಡಿಗಳನ್ನು ಮುಚ್ಚುವ ನಿರ್ಧಾರ ಕೈಗೊಂಡಿದ್ದೆವೆ. ಇನ್ನಾದರೂ ಸ್ಥಳೀಯ ಆಡಳಿತ ಮಂಡಳಿ ಹಾಗೂ ಮಹಾನಗರ ಪಾಲಿಕೆ ಎಚ್ಚೆತ್ತುಕೊಂಡು ಸಾರ್ವಜನಿಕರ ಸಂಕಷ್ಟವನ್ನು ಆಲಿಸಬೇಕು ಎಂದು ಒತ್ತಾಯಿಸಿದರು.