ಹುಬ್ಬಳ್ಳಿ : ಮೂರು ವಾಹನಗಳ ಮಧ್ಯೆ ಭೀಕರ ರಸ್ತೆ ಅಪಘಾತ ಸಂಭವಿಸಿ ಸ್ಥಳದಲ್ಲೇ ಓರ್ವ ಸಾವನ್ನಪ್ಪಿರುವ ಘಟನೆ ಹುಬ್ಬಳ್ಳಿಯ ಹೊರವಲಯದ ಗದಗ ರಸ್ತೆಯ ರಿಂಗ್ ರೋಡ್ ಬಳಿ ನಡೆದಿದೆ. ದುರಂತದಲ್ಲಿ ವಾಣಿಜ್ಯ ತೆರಿಗೆ ಇಲಾಖೆಯ ಜಾರಿ ವಿಭಾಗದ ಚಾಲಕ ರಫೀಕ್ ನದಾಫ್ (34) ಎಂಬವರು ಮೃತಪಟ್ಟಿದ್ದಾರೆ.
ಮುಂದೆ ನಿಂತಿದ್ದ ಲಾರಿ ಚಾಲಕನ ಬಳಿ ಪತ್ರಗಳನ್ನು ಪಡೆಯಲು ರಫೀಕ್ ನದಾಫ್ ಕೆಳಗಿಳಿದು ನಿಂತಿದ್ದರು. ಈ ಸಮಯದಲ್ಲಿ ಹಿಂದಿನಿಂದ ವೇಗವಾಗಿ ಬಂದ ಲಾರಿಯೊಂದು ವಾಣಿಜ್ಯ ತೆರಿಗೆ ಇಲಾಖೆಯ ಟಾಟಾ ಸುಮೋ ವಾಹನಕ್ಕೆ ಡಿಕ್ಕಿ ಹೊಡೆದಿದೆ. ನಂತರ ಮುಂದೆ ನಿಂತಿದ್ದ ಲಾರಿಗೂ ಗುದ್ದಿದೆ. ಪರಿಣಾಮ ರಫೀಕ್ ಸಾವನ್ನಪ್ಪಿದ್ದು, ಇಲಾಖೆಯ ವಾಹನದಲ್ಲಿದ್ದ ಸಹಾಯಕ ಆಯುಕ್ತ ಶ್ರೀಶೈಲ್ ದೊಡ್ಡಮನಿ ಹಾಗೂ ಇಲಾಖೆಯ ಇನ್ಸ್ಪೆಕ್ಟರ್ ಈಶ್ವರ ಸುಧೆ ಕೂದಲೆಳೆಯ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನೆ ಕುರಿತಂತೆ ಪೂರ್ವ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
16 ಮಂದಿ ಸಾವು : ಪಾಕಿಸ್ತಾನದ ಪಂಜಾಬ್‌ನ ಪಿಂಡಿ ಭಟ್ಟಿಯಾನ್ ಪ್ರದೇಶದ ಫೈಸಲಾಬಾದ್ ಮೋಟರ್‌ವೇಯಲ್ಲಿ ಸಂಚರಿಸುತ್ತಿದ್ದ ಬಸ್‌ಗೆ ದಿಢೀರ್ ಬೆಂಕಿ ಹೊತ್ತಿಕೊಂಡಿದ್ದು 16 ಜನರು ಸಾವನ್ನಪ್ಪಿದ್ದಾರೆ. 35 ರಿಂದ 40 ಪ್ರಯಾಣಿಕರಿದ್ದ ಬಸ್ ಕರಾಚಿಯಿಂದ ಇಸ್ಲಾಮಾಬಾದ್‌ಗೆ ತೆರಳುತ್ತಿದ್ದಾಗ ದುರಂತ ಸಂಭವಿಸಿದೆ. ಘಟನೆಯಿಂದ 11 ಮಂದಿ ಗಾಯಗೊಂಡಿದ್ದಾರೆ. ಡೀಸೆಲ್ ಡ್ರಮ್‌ಗಳನ್ನು ಸಾಗಿಸುತ್ತಿದ್ದ ಪಿಕಪ್ ವ್ಯಾನ್‌ಗೆ ಬಸ್ ಡಿಕ್ಕಿ ಹೊಡೆದ ಬಳಿಕ ಬೆಂಕಿ ಹೊತ್ತಿಕೊಂಡಿದೆ ಎಂದು ಸ್ಥಳೀಯ ಸುದ್ದಿ ಮಾಧ್ಯಮಗಳು ವರದಿ ಮಾಡಿವೆ.
ಇದನ್ನೂ ಓದಿ : ಪಾಕಿಸ್ತಾನದಲ್ಲಿ ಬಸ್‌ಗೆ ಬೆಂಕಿ ತಗುಲಿ 16 ಪ್ರಯಾಣಿಕರು ಸಜೀವ ದಹನ
ಆಟೋ ರಿಕ್ಷಾಕ್ಕೆ ಸಾರಿಗೆ ಬಸ್ ಡಿಕ್ಕಿ : ಇನ್ನು ರಸ್ತೆ ಬದಿ ನಿಂತಿದ್ದ ಆಟೋ ರಿಕ್ಷಾಕ್ಕೆ ವೇಗವಾಗಿ ಬಂದ ಸಾರಿಗೆ ಬಸ್ ಡಿಕ್ಕಿ ಹೊಡೆದು ಒಬ್ಬರು ಮೃತಪಟ್ಟು ಇನ್ನಿಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ಆಗಸ್ಟ್ 18 ರಂದು ಹಾಸನದಲ್ಲಿ ನಡೆದಿತ್ತು. ಇರುಮುಡಿ ಮೂರ್ತಿ (54) ಎಂಬುವರು ಸಾವನ್ನಪ್ಪಿದ್ದು, ಬೆಂಗಳೂರಿಂದ ಹಾಸನಕ್ಕೆ ಬಸ್ ಬರುತ್ತಿದ್ದಾಗ ಅವಘಡ ಸಂಭವಿಸಿತ್ತು.
ಇದನ್ನೂ ಓದಿ : Watch : ನಿಂತಿದ್ದ ರಿಕ್ಷಾಗೆ ಡಿಕ್ಕಿ ಹೊಡೆದ ಸಾರಿಗೆ ಬಸ್.. ಓರ್ವ ಸಾವು, ಇನ್ನಿಬ್ಬರ ಸ್ಥಿತಿ ಗಂಭೀರ: ವಿಡಿಯೋ
ಹಾಗೆಯೇ, ಕಲಬುರಗಿ ಹೊರವಲಯದ ಜೇವರ್ಗಿ ಹೆದ್ದಾರಿಯ ನದಿಸಿನ್ನೂರ ಬಳಿ ಗುರುವಾರ (ಆಗಸ್ಟ್ 17) ಬೈಕ್ ಹಾಗೂ ಟಾಟಾ ಏಸ್ ಗೂಡ್ಸ್ ವಾಹನದ ನಡುವೆ ಡಿಕ್ಕಿ ಸಂಭವಿಸಿದ್ದು, ಸ್ಥಳದಲ್ಲಿಯೇ ತಂದೆ - ಮಗಳು ಮೃತಪಟ್ಟು, ತಾಯಿ-ಮಗ ಗಂಭೀರವಾಗಿ ಗಾಯಗೊಂಡಿದ್ದರು. ಕಲಬುರಗಿಯ ರಾಘವೇಂದ್ರ ನಗರದಲ್ಲಿ ಮನೆ ಮಾಡಿಕೊಂಡಿರುವ ಪ್ರಕಾಶ ಹರಳಯ್ಯ (31), ಪುತ್ರಿ ಅಪೇಕ್ಷಾ (4) ಸಾವನ್ನಪ್ಪಿದ್ದರು. ಪತ್ನಿ ಗಾಯತ್ರಿ ಹಾಗೂ ಮಗ ಪ್ರದೀಪ ಗಂಭೀರವಾಗಿ ಗಾಯಗೊಂಡಿದ್ದರು.
ಇದನ್ನೂ ಓದಿ : ಕಲಬುರಗಿ : ಬೈಕ್ - ಗೂಡ್ಸ್ ವಾಹನ ಡಿಕ್ಕಿಯಾಗಿ ತಂದೆ-ಮಗಳು ಸಾವು; ತಾಯಿ - ಮಗ ಆಸ್ಪತ್ರೆಗೆ ದಾಖಲು