ಹುಬ್ಬಳ್ಳಿ: ಕಳೆದ ಒಂದು ತಿಂಗಳಿನಿಂದ ಚರಂಡಿ ಒಡೆದು ಮನೆಗೆ ಕೊಳಚೆ ನೀರು ನುಗ್ಗುತ್ತಿದ್ದರೂ ಪಾಲಿಕೆ ಅಧಿಕಾರಿಗಳು ಇದರ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದೇ ಪ್ರಶ್ನಿಸುವ ಸ್ಥಳೀಯರಿಗೇ ಆವಾಜ್ ಹಾಕುತ್ತಿದ್ದಾರೆ ಎಂದು ನಗರದ ವೀರಾಪೂರ ಓಣಿಯ ನಿವಾಸಿಗಳು ಆರೋಪಿಸಿದ್ದಾರೆ.
ನಗರದ ವೀರಾಪೂರ ಓಣಿಯ 18 ನಂಬರ್ ಶಾಲೆಯ ಹತ್ತಿರ, ಕಳೆದ ಒಂದು ತಿಂಗಳಿನಿಂದ ಚರಂಡಿ ಒಡೆದು, ಮನೆಗೆ ನೀರು ನುಗ್ಗಿದೆ. ಇದರಿಂದ ಕುಟುಂಬಸ್ಥರು ಚರಂಡಿ ವಾಸನೆ ತಾಳಲಾರದೆ ಗೊಳಾಡುತ್ತಿದ್ದಾರೆ. ಇನ್ನು ಚರಂಡಿ ಅವ್ಯವಸ್ಥೆ ಬಗ್ಗೆ ಪಾಲಿಕೆ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಕೊನೆಗೂ ಸ್ಥಳಕ್ಕೆ ಭೇಟಿ ನೀಡಿದ ಅಧಿಕಾರಿಗಳು ಸಮಸ್ಯೆ ಆಲಿಸದೇ ಸ್ಥಳೀಯರಿಗೆ ಅವಾಜ್ ಹಾಕುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಚರಂಡಿ ಒಡೆದು ಮನೆಯಲ್ಲಿ ನೀರು ನುಗ್ಗಿದ ಪರಿಣಾಮ, ಊಟ ಮಾಡಲು ಸಹ ತೊಂದರೆಯಾಗುತ್ತಿದೆ. ಇದರಿಂದ ರೊಚ್ಚಿಗೆದ್ದ ಸ್ಥಳೀಯರು ರಸ್ತೆ ತಡೆದು ಸಮಸ್ಯೆ ಬಗೆ ಹರಿಸುವಂತೆ, ಪಾಲಿಕೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಸ್ತೆಯಲ್ಲಿನ ಚರಂಡಿ ಒಡೆದ ಪರಿಣಾಮ, ಓಣಿಯಲ್ಲಿ ಗಬ್ಬು ವಾಸನೆ ಜೊತೆಗೆ ಮಕ್ಕಳು ಅದರಲ್ಲಿ ಬೀಳುವ ಆತಂಕ ಆತಂಕ ಮೂಡಿದೆ. ಕೂಡಲೇ ಸಮಸ್ಯೆ ಬಗೆಹರಿಸದಿದ್ದರೆ, ಮುಂದಿನ ದಿನಗಳಲ್ಲಿ ಸಂಪೂರ್ಣವಾಗಿ ರಸ್ತೆ ತಡೆದು ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.