ಹುಬ್ಬಳ್ಳಿ: ಕಿಲ್ಲರ್ ಕೊರೊನಾ ಅಟ್ಟಹಾಸ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇದಕ್ಕೆ ಕಡಿವಾಣ ಹಾಕಲು ಹು-ಧಾ ಮಹಾನಗರ ಪಾಲಿಕೆ ಶತಾಯಗತಾಯ ಹೋರಾಟ ನಡೆಸುತ್ತಿದೆ. ಅಲ್ಲದೇ ನಿಯಂತ್ರಣಕ್ಕೆ ಹೊಸ ಯೋಜನೆಯೊಂದನ್ನು ರೂಪಿಸಿದೆ.
ಮಹಾನಗರ ಪಾಲಿಕೆಯಲ್ಲಿ ವಾರ್ಡ್ ವಾರು ಟಾಸ್ಕ್ ಫೋರ್ಸ್ ರಚನೆ ಮಾಡಲಾಗಿದ್ದು, ಈ ತಂಡ ಕೊರೊನಾ ವೈರಸ್ ತಡೆಗೆ ಬೇರು ಮಟ್ಟದಿಂದಲೇ ಕಾರ್ಯನಿರ್ವಹಣೆ ಮಾಡಲಿದೆ.
ಅವಳಿನಗರದ ಪಾಲಿಕೆ 11 ವಲಯ ಕಚೇರಿಯಲ್ಲಿ ಬರುವ 67 ವಾರ್ಡ್ಗಳಲ್ಲಿ ಪ್ರತ್ಯೇಕವಾಗಿ ಟಾಸ್ಕ್ ಫೋರ್ಸ್ ರಚನೆ ಮಾಡಲಾಗಿದೆ. ಆರಂಭಿಕ ಹಂತದಲ್ಲಿ ಪಾಲಿಕೆ ಆರೋಗ್ಯ ಅಧಿಕಾರಿಯನ್ನು ತಂಡದ ಮುಖ್ಯಸ್ಥರನ್ನಾಗಿ ಮಾಡಲಾಗಿದೆ. ಅವರೊಂದಿಗೆ ಸ್ಥಳೀಯ ನಾಗರಿಕರು, ಕಂದಾಯ ಅಧಿಕಾರಿ, ಪ್ರಾಥಮಿಕ ಆರೋಗ್ಯ ಕೇಂದ್ರದ ಮುಖ್ಯಸ್ಥರು, ಆಯಾ ಠಾಣೆಯ ಎಎಸ್ಐ ಸೇರಿದಂತೆ ಪ್ರಾದೇಶಿಕ ಅಧಿಕಾರಿಗಳು ಟಾಸ್ಕ್ ಫೋರ್ಸ್ ತಂಡದಲ್ಲಿ ಇರಲಿದ್ದಾರೆ.
ಈ ಟಾಸ್ಕ್ ಫೋರ್ಸ್ ತಂಡವು ಸಾರ್ವಜನಿಕರು ಮಾಸ್ಕ್ ಧರಿಸುವುದು, ಸ್ಯಾನಿಟೈಸರ್, ಸಾಮಾಜಿಕ ಅಂತರ ಕಾಪಾಡಿಕೊಳ್ಳುವ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲಿದೆ. ಅಲ್ಲದೇ ಅವರು ಕಾರ್ಯನಿರ್ವಹಿಸುವ ವಾರ್ಡ್ಗಳಲ್ಲಿ ಕೊರೊನಾ ಪಾಸಿಟಿವ್ ಬಂದರೇ ಅವರನ್ನು ಆಸ್ಪತ್ರೆಗೆ ದಾಖಲಿಸುವ ಕಾರ್ಯ ಮಾಡಲಿದೆ.