ಹುಬ್ಬಳ್ಳಿ : ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಬಿಡಾಡಿ ದನ ಹಾಗೂ ಕರುಗಳ ಕಾಟಕ್ಕೆ ವಾಹನ ಸವಾರರು, ಪಾದಚಾರಿಗಳು ಪರದಾಡುವಂತಾಗಿದ್ದು, ಈ ಹಿನ್ನೆಲೆಯಲ್ಲಿ ಹು-ಧಾ ಮಹಾನಗರ ಪಾಲಿಕೆ ಬಿಡಾಡಿದನಗಳ ಕಾರ್ಯಾಚರಣೆಗೆ ಮುಂದಾಗಿದೆ.
ಇನ್ನೂ ನಿರಂತರವಾಗಿ ಬೀಳುತ್ತಿರುವ ಮಳೆಯಿಂದ ನಗರದ ಬಹುತೇಕ ರಸ್ತೆಗಳು ಗುಂಡಿಮಯವಾಗಿವೆ. ಅದರಲ್ಲಿ ಬಿಡಾಡಿ ದನ ಹಾಗೂ ಕರುಗಳ ಕಾಟವೂ ಹೆಚ್ಚಾಗಿರುವ ಕಾರಣ ಸವಾರರು ಭೀತಿಯಿಂದಲೇ ವಾಹನ ಚಾಲನೆ ಮಾಡಬೇಕಾಗಿದೆ. ನಿತ್ಯ ಸಾವಿರಾರು ಜನ ಓಡಾಡುವ ಗೋಕುಲ ರಸ್ತೆ, ಸರಾಫ್ ಗಟ್ಟಿ, ದುರ್ಗದ ಬೈಲ್, ಜನತಾ ಬಜಾರ್, ತೊರವಿಹಕ್ಕಲ, ರೈಲ್ವೆ ನಿಲ್ದಾಣ ರಸ್ತೆ, ಬಂಕಾಪುರ ಚೌಕ್, ಶಿರೂರ ಪಾರ್ಕ್, ಅಕ್ಷಯ ಪಾರ್ಕ್ ಕಾಲೊನಿಯಲ್ಲಿ ಹಾವಳಿ ಹೆಚ್ಚಾಗಿದೆ.
ಹೊಸೂರು ಕ್ರಾಸ್, ವಿದ್ಯಾನಗರದ ಬಳಿ ಬಿಆರ್‌ಟಿಎಸ್ ರಸ್ತೆಗಳ ಮೇಲೂ ಓಡಾಡುತ್ತಿವೆ. ಅಲ್ಲದೇ ಪಾಲಿಕೆ ವಿಲೇವಾರಿ ಮಾಡದೇ ಬಿಟ್ಟ ಕಸ ತಿಂದು ಬಿಡಾಡಿ ದಿನಗಳು ಕಸವೆನ್ನೆಲ್ಲ ಚೆಲ್ಲಾಪಿಲ್ಲಿ ಮಾಡಿ ಕೊಳೆ ಹೆಚ್ಚಿಸುತ್ತಿವೆ. ಪಾದಚಾರಿ ಮಾರ್ಗದಲ್ಲಿ ಮಲಗುತ್ತಿವೆ. ಪರಿಣಾಮ ಬಿಡಾಡಿ ದನಗಳನ್ನು ಹಿಡಿಯಲು ಪಾಲಿಕೆ ಬಿಡಾಡಿ ದನಗಳ ಕಾರ್ಯಾಚರಣೆ ಮುಂದುವರೆಸಿದೆ. ಅವಳಿನಗರದಲ್ಲಿರುವ ಬಿಡಾಡಿ ದನಗಳನ್ನು ಹಿಡಿದು ಅದರ ಗುಂಚಿಯಲ್ಲಿ ನಿರ್ಮಿಸಿರುವ ಗೋಶಾಲೆಯಲ್ಲಿ ಬಿಡಲಾಗುತ್ತಿದೆ. ಒಟ್ಟಿನಲ್ಲಿ ಪಾಲಿಕೆಯು ಬಿಡಾಡಿದನಗಳಿಂದ ಬೇಸತ್ತಿದ್ದ ಜನರಿಗೆ ಸ್ವಲ್ಪ ಮಟ್ಟಿಗೆ ನಿರಾಳವಾಗುಂತೆ ಮಾಡಿದೆ.