ಹುಬ್ಬಳ್ಳಿ: ಹಿರಿಯ ಸಾಹಿತಿ, ಪತ್ರಕರ್ತರಾದ ನಾಡೋಜ ಡಾ. ಪಾಟೀಲ್ ಪುಟ್ಟಪ್ಪ ಅನಾರೋಗ್ಯದಿಂದ ಕಿಮ್ಸ್ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದು ಆಸ್ಪತ್ರೆಗೆ ರಾಜ್ಯ ಗೃಹ ಸಚಿವ ಬಸವರಾಜ ಬೊಮ್ಮಾಯಿ ಭೇಟಿ ನೀಡಿ ಪಾಪು ಆರೋಗ್ಯ ವಿಚಾರಿಸಿದರು.
ಇದೇ ವೇಳೆ ಪಾಪು ಅವರ ಕುಟುಂಬಸ್ಥರಿಗೆ ಧೈರ್ಯ ತುಂಬಿದರು. ನಂತರ ಅವರ ಆರೋಗ್ಯ ಕುರಿತಂತೆ ವೈದ್ಯಾಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು. ನಂತರ ಮಾತನಾಡಿದ ಅವರು, ಕರ್ನಾಟಕ ನಾಡು, ನುಡಿಗಾಗಿ ನಾಡೋಜ ಪಾಟೀಲ ಪುಟ್ಟಪ್ಪನವರ ಕೊಡುಗೆ ಅಪಾರ. ಅವರು ಶೀಘ್ರ ಗುಣಮುಖರಾಗಲಿ ಎಂದು ಹರಸಿದರು. ಜೀವನ ಪೂರ್ತಿ ಕನ್ನಡದ ಹೋರಾಟಕ್ಕೆ ಮುಡಿಪಾಗಿಟ್ಟಿರುವ ಅವರ ಕೊಡುಗೆ ಅವಿಸ್ಮರಣೀಯ.
ಈಗಾಗಲೇ ಕಿಮ್ಸ್ ವೈದ್ಯರೊಂದಿಗೆ ಸಮಾಲೋಚನೆ ನಡೆಸಿದ್ದೇನೆ. ಎಲ್ಲ ರೀತಿಯ ಚಿಕಿತ್ಸೆಯನ್ನೂ ಕೂಡ ನೀಡಲಾಗುತ್ತಿದೆ. ಉಸಿರಾಟ ತೊಂದರೆಯಿಂದ ಅವರು ಬಳಲುತ್ತಿದ್ದು ಸ್ವಲ್ಪ ಪ್ರಮಾಣದಲ್ಲಿ ಅಲ್ಲಲ್ಲಿ ರಕ್ತ ಹೆಪ್ಪುಗಟ್ಟಿದೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ. ವೈದ್ಯರು ಸಹ ಉತ್ತಮ ರೀತಿಯಲ್ಲಿ ಚಿಕಿತ್ಸೆ ನೀಡುತ್ತಿದ್ದಾರೆ. ಅವರಿಗೆ ಧನ್ಯವಾದ ತಿಳಿಸುತ್ತೇನೆ. ಶೀಘ್ರವಾಗಿ ಪಾಪು ಅವರು ಗುಣಮುಖರಾಗಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡುತ್ತೇನೆ ಎಂದು ಸಚಿವ ಬೊಮ್ಮಾಯಿ ಹೇಳಿದರು.