ಹುಬ್ಬಳ್ಳಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ನಾಳೆ ವಾಣಿಜ್ಯ ನಗರಿ ಹುಬ್ಬಳ್ಳಿಗೆ ಆಗಮಿಸಲಿದ್ದಾರೆ. 5 ದಿನಗಳವರೆಗೆ ನಡೆಯಲಿರುವ 26ನೇ ರಾಷ್ಟ್ರೀಯ ಯುವಜನೋತ್ಸವ ಕಾರ್ಯಕ್ರಮಕ್ಕೆ ಮೋದಿ ಗುರುವಾರ ಚಾಲನೆ ನೀಡಲಿದ್ದಾರೆ. ಪ್ರಧಾನಿ ಆಗಮನದ ಹಿನ್ನೆಲೆಯಲ್ಲಿ ನಗರದಲ್ಲಿ ಸಂಚಾರ ಮಾರ್ಗದಲ್ಲಿ ಕೆಲ ಬದಲಾವಣೆ ಮಾಡಲಾಗಿದೆ. ಜೊತೆಗೆ ವಾಹನ ನಿಲುಗಡೆಗೆ ಪ್ರತ್ಯೇಕ ಸ್ಥಳಗಳನ್ನು ನಿಗದಿಪಡಿಸಲಾಗಿದೆ. ಬಸ್ಗಳ ಸಂಚಾರ ಮಾರ್ಗ ಬದಲಾವಣೆ ಹಾಗೂ ಬಸ್ ವ್ಯತ್ಯಯದಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗಲಿದೆ. ವಿದ್ಯಾರ್ಥಿಗಳಿಗೆ ತೊಂದರೆಯಾಗುವ ಹಿನ್ನೆಲೆಯಲ್ಲಿ ರಜೆ ಘೋಷಣೆ ಮಾಡಲಾಗಿದೆ.
ಹೀಗಾಗಿ ಹುಬ್ಬಳ್ಳಿ ಶಹರ ವ್ಯಾಪ್ತಿಯ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಿಗೆ ರಜೆ ನೀಡಿ ಧಾರವಾಡ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಆದೇಶ ಹೊರಡಿಸಿದ್ದಾರೆ.
ಇನ್ನು, ಇಂದು ಮತ್ತು ನಾಳೆ(12ರಂದು) ಮಧ್ಯಾಹ್ನ 01ರಿಂದ ಸಂಜೆ 7 ಗಂಟೆವರೆಗೆ ಗೋಕುಲ ರಸ್ತೆ ಮಾಪ್ಸಲ್ ಡಿಪೋದಿಂದ ಸಿದ್ದೇಶ್ವರ ಪಾರ್ಕ್, ಶಿರೂರ ಪಾರ್ಕ್, ಕಿಮ್ಸ್ ಮುಖ್ಯ ರಸ್ತೆ, ಹೊಸೂರ ರಸ್ತೆ, ಭಗತಸಿಂಗ್ ವೃತ್ತ, ಪ್ರವಾಸಿ ಮಂದಿರ ಎದುರು (ಐಬಿ), ಬಾಳಿಗಾ ಕ್ರಾಸ್, ದೇಸಾಯಿ ಕ್ರಾಸ್, ರೈಲ್ವೆ ಮೈದಾನದ ಯುವಜನೋತ್ಸವ ಕಾರ್ಯಕ್ರಮ ಸ್ಥಳದವರೆಗೆ ಎಲ್ಲಾ ವಾಹನಗಳ ಸಂಚಾರ ನಿಷೇಧಿಸಲಾಗಿದೆ.
ನವಲಗುಂದ ಕಡೆಯಿಂದ ಬರುವ ಬಸ್ಗಳನ್ನು ಕೆ.ಎಚ್.ಪಾಟೀಲ್ ರಸ್ತೆಯ ಶೃಂಗಾರ ಕ್ರಾಸ್ ಬಳಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದ್ದು, ಗದಗ ರಸ್ತೆಯ ವಿನೋಭಾನಗರದಲ್ಲಿ ವಾಹನಗಳ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ. ನವಲಗುಂದ ರಸ್ತೆ ಕಡೆಯಿಂದ ಆಗಮಿಸುವ ವಾಹನಗಳು ಸರ್ವೋದಯ ಸರ್ಕಲ್, ಶೃಂಗಾರ ಕ್ರಾಸ್, ಸೇಂಟ್ ಎಂಡ್ರಿಯೋ ಸ್ಕೂಲ್, ಆರ್‌ಪಿಎಫ್ ಕ್ರಾಸ್ ಮೂಲಕ ವಿನೋಭಾನಗರ ಮೈದಾನ ತಲುಪಲಿವೆ. ಗದಗ ಕಡೆಯಿಂದ ಬರುವ ಬಸ್ಗಳು ಗದಗ ಚಿಲ್ಲಿ ಮೈದಾನದಲ್ಲಿ ಪಾರ್ಕಿಂಗ್ ಮಾಡಲು ತಿಳಿಸಲಾಗಿದೆ.
ಮೋದಿ ಆಗಮನದ ಹಿನ್ನೆಲೆ ಸಿಂಗಾರಗೊಂಡ ಹುಬ್ಬಳ್ಳಿ.. ಮೋದಿ ಆಗಮನದ ಹಿನ್ನೆಲೆ ಹುಬ್ಬಳ್ಳಿಯನ್ನು ಸ್ವಚ್ಛಗೊಳಿಸಲಾಗಿದ್ದು ರಸ್ತೆ ಗುಂಡಿಗಳನ್ನು ಮುಚ್ಚಲಾಗಿದೆ. ಅಲ್ಲದೇ ರಸ್ತೆ ವಿಭಜಕಗಳಿಗೆ ಸುಣ್ಣ-ಬಣ್ಣ ಬಳಿದು ಅಲಂಕರಿಸಲಾಗಿದೆ. ಮೋದಿ ಆಗಮನದ ಹಿನ್ನೆಲೆ ಪರ್ಯಾಯ ಮಾರ್ಗಗಗಳಾದ ಗೋಕುಲ ರಸ್ತೆ, ಅಕ್ಷಯ ಪಾರ್ಕ್, ಶಿರೂರು ಪಾರ್ಕ್, ಕಿಮ್ಸ್ ಮುಖ್ಯ ರಸ್ತೆ, ಹೊಸೂರು ವೃತ್ತದ ಮಾರ್ಗಗಳನ್ನು ಪ್ರಧಾನಿ ಸಂಚಾರಕ್ಕೆ ಸಿದ್ಧಗೊಳಿಸಲಾಗಿದೆ. ಅಲ್ಲದೇ ರಸ್ತೆಗಳಲ್ಲಿ ಕಾರ್ಯಕರ್ತರ ಸ್ವಾಗತದ ಬ್ಯಾನರ್ಗಳು ರಾರಾಜಿಸುತ್ತಿವೆ. ಇನ್ನು, ಮೋದಿಯವರಿಗೆ ಸ್ವಾಗತ ಕೋರಲು ಬ್ಯಾನರ್ಗಳನ್ನು ಹಾಕಲಾಗಿದೆ. ಪ್ರಧಾನಿ ಅವರು ಇರುವಂತಹ ಕಟೌಟ್ಗಳನ್ನು ನಗರದೆಲ್ಲೆಡೆ ನಿಲ್ಲಿಸಲಾಗಿದೆ.
ಪ್ರತಿದಿನ ವೈವಿಧ್ಯಮಯ ಆಹಾರ.. ಸುಮಾರು 600 ಬಾಣಸಿಗರು ಒಂದು ಲಕ್ಷ ಜನರಿಗಾಗಿ ಒಳ್ಳೆಯ ಆಹಾರ, ತಿನಿಸುಗಳನ್ನು ಸಿದ್ದ ಪಡಿಸುವ ಕಾರ್ಯದಲ್ಲಿ ತೊಡಗಿದ್ದು, ದೇಶದ ವಿವಿಧ ಭಾಗಗಳ ಸ್ವಾದಿಷ್ಟ ಭಕ್ಷ್ಯಗಳು ತಯಾರಾಗುತ್ತಿವೆ. ಧಾರವಾಡದ ಕೃಷಿ ವಿವಿ ಆವರಣದ ಐದು ಎಕರೆ ಪ್ರದೇಶದಲ್ಲಿ ಆಹಾರ ತಯಾರಿಸಲು ವ್ಯವಸ್ಥೆ ಮಾಡಲಾಗಿದೆ. ಕೃಷಿ ವಿವಿಯ ಸಭಾಂಗಣದಲ್ಲಿ ಊಟ ಬಡಿಸಲು ಸಿದ್ಧತೆ ಕೈಗೊಳ್ಳಲಾಗಿದೆ. ಈಗಾಗಲೇ ಆಹಾರ ವಸ್ತುಗಳು, ಪಾತ್ರೆ, ಪಗಡೆಗಳು 12 ಲಾರಿಗಳಲ್ಲಿ ಸಾಮಗ್ರಿಗಳು ಬಂದಿಳಿದಿವೆ.
30 ಸಾವಿರ ಮಂದಿಗೆ ಅವಕಾಶ.. ವಿಶಾಲವಾದ ವೇದಿಕೆ ನಿರ್ಮಿಸಿದ್ದು, ಉತ್ಸವದಲ್ಲಿ ಪಾಳ್ಗೊಳ್ಳುವ ಕಲಾವಿದರಿಗೆ, ಗಣ್ಯರಿಗೆ ಹಾಗೂ ಸಾರ್ವಜನಿಕರಿಗೆಂದು ಬೃಹತ್ ಪೆಂಡಾಲ್ ಹಾಕಲಾಗಿದೆ. ನೋಂದಣಿ ಮಾಡಿಕೊಂಡ ವಿವಿಧ ರಾಜ್ಯಗಳ ಆಯ್ದ ಯುವಕರಿಗೆ ಮತ್ತು ಒಂದು ಸಾವಿರದಷ್ಟು ಗಣ್ಯರಿಗೆ ಆಸನಗಳ ವ್ಯವಸ್ಥೆ ಮಾಡಲಾಗಿದೆ.
ಇದನ್ನೂ ಓದಿ: ರಾಷ್ಟ್ರೀಯ ಯುವಜನೋತ್ಸವಕ್ಕೆ ಸಿಂಗಾರಗೊಂಡ ಹುಬ್ಬಳ್ಳಿ: ಗಮನ ಸೆಳೆಯುತ್ತಿರುವ ಕಟೌಟ್ಗಳು
ಇದನ್ನೂ ಓದಿ: ನಾಳೆ ಹುಬ್ಬಳ್ಳಿಗೆ ಪ್ರಧಾನಿ ಆಗಮನ ಹಿನ್ನೆಲೆ ಕೆಲವೆಡೆ ಸಂಚಾರ ನಿಷೇಧ, ಮಾರ್ಗ ಬದಲಾವಣೆ