ಧಾರವಾಡ/ಹುಬ್ಬಳ್ಳಿ: ಜಿಲ್ಲೆಯಲ್ಲಿ ಎಡೆಬಿಡದೇ ಸುರಿಯುತ್ತಿರುವ ಮಳೆಯಿಂದ ಧಾರವಾಡದಲ್ಲಿ ಸರ್ಕಾರಿ ಕಚೇರಿಗಳು ಸೋರುತ್ತಿವೆ. ಧಾರವಾಡ ತಹಶೀಲ್ದಾರರ ಕಚೇರಿಯಲ್ಲಿ ಮಳೆ ನೀರು ನಿಂತು ಕಚೇರಿ ಸಿಬ್ಬಂದಿ ಕೆಲಸಕ್ಕೆ ತೊಂದರೆ ಉಂಟು ಮಾಡಿದೆ. ತಹಶೀಲ್ದಾರ್ ಕಚೇರಿ ಅಭಿಲೇಖಾಲಯ ಕಚೇರಿಯಲ್ಲಿ ಮಳೆ ನೀರು ನಿಂತು ಕೆಲಸಕ್ಕೆ ಅಡಚಣೆ ಉಂಟು ಮಾಡುತ್ತಿದೆ.
ರಾಯನಾಳದಲ್ಲಿ ಮನೆ ಕುಸಿತ
ಸತತ ಮಳೆಯಿಂದಾಗಿ ತಾಲೂಕಿನ ರಾಯನಾಳ ಗ್ರಾಮದ ನಿಂಗಪ್ಪ ಫಕ್ಕಿರಪ್ಪ ಹುಬ್ಬಳ್ಳಿ ಎಂಬುವವರ ಮನೆಯ ಮುಂಭಾಗದ ಛಾವಣಿ ಕುಸಿದಿದ್ದು, ಪರಿಣಾಮ ಮುಂಭಾಗದ ತಡೆಗೋಡೆಯೂ ನೆಲಕಚ್ಚಿದೆ. ಅದೃಷ್ಟವಶಾತ್ ಆ ಸಂದರ್ಭದಲ್ಲಿ ಮನೆಯಲ್ಲಿ ಯಾರೂ ಇಲ್ಲದ ಕಾರಣ ಯಾರಿಗೂ ಏನೂ ಆಗಿಲ್ಲ. ಇನ್ನೂ ಸ್ಥಳಕ್ಕೆ ಗ್ರಾಮ ಲೆಕ್ಕಾಧಿಕಾರಿ ಎಮ್.ಎ. ಇಮಾರತವಾಲೆ ಬಂದು ಪರಿಶೀಲನೆ ಮಾಡಿ ಪರಿಹಾರ ಒದಗಿಸುವುದಾಗಿ ತಿಳಿಸಿದ್ದಾರೆ.
ಬೃಹತ್ ಮರ ನೆಲಕ್ಕೆ
ನಿರಂತರ ಸುರಿದ ಮಳೆಯಿಂದಾಗಿ ಬೃಹತ್ ಮರ ನೆಲಕ್ಕೆ ಉರುಳಿದ ಘಟನೆ ಹುಬ್ಬಳ್ಳಿಯ ಸಿದ್ಧಾರೂಢರ ಮಠದ ಆವರಣದಲ್ಲಿ ನಡೆದಿದೆ. ಇಂದು ನಗರದ ಸಿದ್ಧಾರೂಢರ ಮಠದಲ್ಲಿರುವ ನಿರಂತರ ಸುರಿದ ಮಳೆಗೆ ಬೃಹತ್ ಮರವೊಂದು ಬೇರು ಸಮೇತ ಉರುಳಿ ಬಿದ್ದಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿಯಾಗಿಲ್ಲ. ಸ್ಥಳಕ್ಕೆ ದೌಡಯಿಸಿ ಮಠದ ಸ್ವಾಮಿಗಳು ಹಾಗೂ ಅರಣ್ಯ ಅಧಿಕಾರಿಗಳು ಮರವನ್ನು ಬೇರೆ ಕಡೆ ಸಾಗಿಸುವ ಕಾರ್ಯ ಮಾಡಿದ್ದಾರೆ.
ಧಾರವಾಡದ ನವಲೂರ ಕೆರೆ ಮಳೆ ನೀರಿನಿಂದ ಭರ್ತಿ
ಕೆರೆಯ ಅಕ್ಕಪಕ್ಕ ಇರುವ ಮನೆಗಳ ಜನರಿಗೆ ಕಂದಾಯ ಇಲಾಖೆ ಗ್ರಾಮಲೆಕ್ಕಾಧಿಕಾರಿ ಹಾಗೂ ಸಿಬ್ಬಂದಿ ಜಾಗೃತಿ ಮೂಡಿಸುತ್ತಿದ್ದಾರೆ. ಈಗಾಗಲೇ ಎರಡು ಮನೆಯವರು ತಮ್ಮ ಮನೆ ಖಾಲಿ ಮಾಡಿ, ಸಂಬಂಧಿಕರ ಮನೆಗೆ ತೆರಳಿದ್ದಾರೆ. ಉಳಿದ ಮನೆಯವರು ಮನೆ ತೊರೆಯುತ್ತಿದ್ದಾರೆ. ಅಗತ್ಯವಿದ್ದಲ್ಲಿ ನವಲೂರು ಗ್ರಾಮದಲ್ಲಿ ಪರಿಹಾರ ಕೇಂದ್ರ ಆರಂಭಿಸುವುದಾಗಿ ತಹಶೀಲ್ದಾರ್ ಪ್ರಕಾಶ ಕುದರಿ ತಿಳಿಸಿದ್ದಾರೆ.
ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ
ಜಿಲ್ಲಾದ್ಯಂತ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಜಿಲ್ಲೆಯ ಎಲ್ಲ ಅಂಗನವಾಡಿ ಕೇಂದ್ರಗಳು, ಶಾಲೆ, ಕಾಲೇಜು, ವಿಶ್ವವಿದ್ಯಾಲಯ ಸೇರಿದಂತೆ ಮತ್ತಿತರ ಶಿಕ್ಷಣ ಸಂಸ್ಥೆಗಳಿಗೆ ಮುಂದಿನ ಮೂರು ದಿನಗಳ ಕಾಲ ರಜಾ ಅವಧಿ ವಿಸ್ತರಿಸಿ ಜಿಲ್ಲಾಧಿಕಾರಿ ದೀಪಾ ಚೋಳನ್ ಆದೇಶ ಹೊರಡಿಸಿದ್ದಾರೆ. ಆಗಸ್ಟ್ 10 ಶನಿವಾರದವರೆಗೆ ರಜೆ ಮುಂದುವರೆಯಲಿದೆ. ಮಕ್ಕಳು, ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಶಾಸಕ ಪ್ರಸಾದ್ ಅಬ್ಬಯ್ಯ ಭೇಟಿ
ಸತತವಾಗಿ ಸುರಿದ ಮಳೆಗೆ ಜಿಲ್ಲಾದ್ಯಂತ ಮನೆಗಳು ನೆಲಚ್ಚಿದ್ದು, ಅಪಾರ ಪ್ರಮಾಣದ ಹಾನಿಯಾಗಿವೆ. ಹಾನಿಯಾದ ಮನೆಗಳಿಗೆ ಹುಬ್ಬಳ್ಳಿ - ಧಾರವಾಡ ಪೂರ್ವ ಕ್ಷೇತ್ರದ ಶಾಸಕ ಪ್ರಸಾದ ಅಬ್ಬಯ್ಯ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ವೇಳೆ, ಕುಸಿತ ಕಂಡ ಮನೆ ಮಾಲೀಕರಿಗೆ ಸಾಂತ್ವನ ಹೇಳಿ ಮನೆ ಕಟ್ಟಿಸಿ ಕೊಡುವುದಾಗಿ ಭರವಸೆ ನೀಡಿದರು. ನಂತರ ಶಿಥಿಲಗೊಂಡ ಮನೆಗಳಿಗೆ ಭೇಟಿ ನೀಡಿ ಮನೆ ಬಿಡುವಂತೆ ಮನವಿ ಮಾಡಿದಲ್ಲದೇ, ಅಧಿಕಾರಿಗಳಿಗೆ ಸೂಕ್ತವಾದ ಜಾಗ ವ್ಯವಸ್ಥೆ ಮಾಡಿ ಕೊಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.