ಹುಬ್ಬಳ್ಳಿ: ಧಾರವಾಡ ಜಿಲ್ಲಾದ್ಯಂತ ಸುರಿಯುತ್ತಿರುವ ವರುಣ ಸಾಕಷ್ಟು ಅವಾಂತರ ಸೃಷ್ಟಿಸಿದ್ದಾನೆ. ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿವೆ. ಜಮೀನಿನಲ್ಲಿ ನೀರು ನಿಂತ ಪರಿಣಾಮ ಬೆಳೆದ ಬೆಳೆ ಕೊಳೆಯುವ ಸ್ಥಿತಿ ಇದೆ.
ವಾಣಿಜ್ಯ ನಗರಿ ಹುಬ್ಬಳ್ಳಿ ಸೇರಿದಂತೆ ಧಾರವಾಡ ಜಿಲ್ಲೆಯಲ್ಲಿ ಸುರಿಯುತ್ತಿರುವ ಮಳೆಯಿಂದ ರೈತರ ಜಮೀನು ಜಲಾವೃತಗೊಂಡಿದ್ದು, ಅನ್ನದಾತ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದಂತಾಗಿದೆ. ಕಳೆದ ಮೂರು ನಾಲ್ಕು ದಿನಗಳಿಂದ ಬಿಡದೇ ಸುರಿಯುತ್ತಿರುವ ಮಳೆಯಿಂದ ರೈತರು ಹೊಲದ ಕೆಲಸವನ್ನೆಲ್ಲ ಬಿಟ್ಟು ಮನೆಯಲ್ಲಿಯೇ ಇರಬೇಕಾಗಿದ್ದು, ಬೆಳೆಯಲ್ಲ ಸಂಪೂರ್ಣ ಜಲಾವೃತಗೊಂಡಿವೆ.
ಇನ್ನು ಜಿಲ್ಲೆಯಲ್ಲಿ ಸುರಿಯುತ್ತಿರುವ ಮಳೆಯಿಂದ ಹಳ್ಳ - ಕೊಳ್ಳಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಕಲಘಟಗಿ ತಾಲೂಕಿನ ಸಂಗಮೇಶ್ವರ ಗ್ರಾಮದ ಹತ್ತಿರದ ಮಂಗ್ಯಾನಹಳ್ಳ ತುಂಬಿ ಹರಿಯುತ್ತಿದ್ದು, ಹಳಿಯಾಳ ತಾಲೂಕಿನೊಂದಿಗಿರುವ ಸಂಪರ್ಕ ಕಡಿತವಾಗಿದೆ. ರಸ್ತೆಗೆ ಸರಿಯಾದ ಬ್ರಿಡ್ಜ್ ಇಲ್ಲದ್ದರಿಂದ ಸಂಪೂರ್ಣ ಮುಳುಗಡೆಯಾಗಿದೆ. ಬಸ್, ವಾಹನ ಸಂಚಾರ ಸ್ಥಗಿತವಾಗಿದ್ದು, ಇದರಿಂದ ಸುಮಾರು 10 ಹಳ್ಳಿಗಳ ಸಂಪರ್ಕ ಬಂದ್ ಆಗಿದೆ.
ಇದನ್ನೂ ಓದಿ: Watch video: ಕೃಷ್ಣಾ ನದಿ ಪ್ರವಾಹ.. ಕರ್ನಾಟಕದ ಬಸ್ನಲ್ಲಿದ್ದ ಪ್ರಯಾಣಿಕರ ರಕ್ಷಣೆ
ಈಗಾಗಲೇ ಕಿಲ್ಲರ್ ಕೊರೊನಾ ಸಂಕಷ್ಟದಿಂದ ಸಾಕಷ್ಟು ಕಷ್ಟಗಳನ್ನು ಅನುಭವಿಸಿರುವ ರೈತ ಸಮುದಾಯ ಬಿಡದೇ ಸುರಿಯುತ್ತಿರುವ ಮಳೆಯಿಂದ ಮತ್ತಷ್ಟು ಕಂಗಾಲಾಗಿದ್ದಾನೆ. ರೈತನ ಪರಿಸ್ಥಿತಿ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದ್ದು, ಒಂದಾದ ಮೇಲೊಂದರಂತೆ ಕಷ್ಟಗಳು ಕಾಡುತ್ತಿವೆ.