ಹುಬ್ಬಳ್ಳಿ : ಕಳೆದ ಹಲವು ದಿನಗಳಿಂದ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ 104 ಆರೋಗ್ಯ ಸಹಾಯವಾಣಿ ಸಿಬ್ಬಂದಿ ಪ್ರತಿಭಟನೆ ನಡೆಸುತ್ತಿದ್ದಾರೆ. ಹಾಗಾಗಿ, ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಅವರು ಕೂಡಲೇ ಈ ಸಮಸ್ಯೆಯನ್ನು ಪರಿಸುವ ಭರವಸೆ ನೀಡಿದ್ದಾರೆ.
ಕಳೆದ 16 ದಿನಗಳಿಂದ ಆರೋಗ್ಯ ಸಹಾಯವಾಣಿ ಸಿಬ್ಬಂದಿ ಐಟಿ ಪಾರ್ಕ್ನಲ್ಲಿರುವ ಆರೋಗ್ಯ ಸಹಾಯವಾಣಿ ಕೇಂದ್ರದಲ್ಲಿ ಸುಮಾರು 200ಕ್ಕೂ ಅಧಿಕ ಮಂದಿ ಕೆಲಸಕ್ಕೆ ಸಂಬಳ ಸಿಗದೆ ಪರದಾಡುತ್ತಿದ್ದರು.
ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಪ್ರತಿಭಟನೆ ನಡೆಸಿದ್ದರು. ಆದರೆ, ಈವರೆಗೂ ಯಾರೊಬ್ಬರೂ ಬಂದು ಸ್ಪಂದಿಸಿರಲಿಲ್ಲ. ಇವತ್ತು ಆರೋಗ್ಯ ಸಚಿವರು ನಗರಕ್ಕೆ ಪ್ರವಾಸ ಬಂದ ವೇಳೆ ಆರೋಗ್ಯ ಸಹಾಯವಾಣಿ ಸಿಬ್ಬಂದಿ ಸಚಿವರನ್ನು ಭೇಟಿ ಮಾಡಿ ತಮ್ಮ ಅಳಲು ತೋಡಿಕೊಂಡರು.
ಸಿಬ್ಬಂದಿ ಅಹವಾಲು ಸ್ವೀಕರಿಸಿದ ಸಚಿವರು, ಈ ವಿಷಯ ಟೆಂಡರ್ ಹಂತದಲ್ಲಿದೆ. ಕೂಡಲೇ ಕ್ಯಾಬಿನೆಟ್ನಲ್ಲಿ ಚರ್ಚಿಸಿ ಸಮಸ್ಯೆ ಪರಿಹರಿಸಲಾಗುವುದು. ಯಾರು ಸಿಬ್ಬಂದಿಗೆ ಸಮಸ್ಯೆ ಮಾಡುವರೋ ಅಂತವರನ್ನು ಟೆಂಡರ್ ಹಂತದಿಂದ ಕೈಬಿಡಲಾಗುವುದು. ಟೆಂಡರ್ ಕರೆಯುವ ನಿಯಮಕ್ಕೆ ಸಂಬಂಧಿಸಿದಂತೆ ಹೊಸ ನಿಯಮ ರೂಪಿಸಲಾಗುವುದು. ಸರ್ಕಾರವೇ ನಿಯಂತ್ರಿಸುವ ಅಧಿಕಾರ ಇಟ್ಟುಕೊಳ್ಳಲಿದೆ ಎಂದರು.