ಹುಬ್ಬಳ್ಳಿ : ರಾಜ್ಯದ 2ನೇ ಅತಿದೊಡ್ಡ ಮಹಾನಗರ ಪಾಲಿಕೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಹು-ಧಾ ಮಹಾನಗರ ಪಾಲಿಕೆ ಚುನಾವಣೆಗೆ ದಿನಗಣನೆ ಪ್ರಾರಂಭವಾಗಿದೆ. ತೀರ್ಪು ನಾಳೆ ಹೊರ ಬೀಳುವ ಸಾಧ್ಯತೆ ಇದೆ. ಮಾರ್ಚ್ 2019ರಿಂದ ಜನಪ್ರತಿನಿಧಿಗಳ ಆಡಳಿತದಿಂದ ದೂರವಾಗಿದ್ದ ಹುಬ್ಬಳ್ಳಿ-ಧಾರವಾಡ ಮಹಾನಗರಪಾಲಿಕೆ ಚುನಾವಣೆಗೆ ದಿನಗಣನೆ ಆರಂಭವಾಗಿದೆ.
ಪಾಲಿಕೆ ಚುನಾವಣೆ ಹಿನ್ನೆಲೆ ಹೊರಡಿಸಲಾಗಿದ್ದ ವಾರ್ಡ್ ಮರು ವಿಂಗಡಣೆ ಹಾಗೂ ಮೀಸಲಾತಿ ಅಧಿಸೂಚನೆಗಳನ್ನು ನ್ಯಾಯಾಲಯಕ್ಕೆ ನೀಡಿದ ಭರವಸೆಯಂತೆ ಹಿಂಪಡೆಯದೇ ವಿಳಂಬ ಮಾಡಿದ್ದಕ್ಕೆ ನಗರಾಭಿವೃದ್ಧಿ ಇಲಾಖೆ ಪ್ರಧಾನ ಕಾರ್ಯದರ್ಶಿ ಕಳೆದ ತಿಂಗಳು 30ರಂದು ಹೈಕೋರ್ಟ್ಗೆ ಬೇಷರತ್ ಕ್ಷಮೆ ಕೋರಿದ್ದಾರೆ.
ಮುಖ್ಯ ನ್ಯಾಯಮೂರ್ತಿ ಎ ಎಸ್ ಓಕ್ ನೇತೃತ್ವದ ವಿಭಾಗೀಯ ಪೀಠದೆದುರು ನಗರಾಭಿವೃದ್ಧಿ ಕಾರ್ಯದರ್ಶಿ ತುಷಾರ್ ಗಿರಿನಾಥ ಪ್ರಮಾಣ ಪತ್ರ ನೀಡಿದರು. ಹು-ಧಾ ಪಾಲಿಕೆ ಚುನಾವಣೆ ನಡೆಸಲು ಕ್ರಮಕೈಗೊಳ್ಳಲಾಗುತ್ತದೆ. ಈ ನಿಟ್ಟಿನಲ್ಲಿ ಕೋರ್ಟ್ ನೀಡುವ ನಿರ್ದೇಶನಗಳಿಗೆ ಸರ್ಕಾರ ಬದ್ಧ ಎಂದು ಹೇಳಿಕೆ ನೀಡಿರುವುದನ್ನು ದಾಖಲಿಸಿಕೊಂಡು ಡಿ.10ಕ್ಕೆ ವಿಚಾರಣೆಯನ್ನ ಮುಂದೂಡಲಾಗಿತ್ತು.
ಇಂತಹದ್ದೇ ಪರಿಸ್ಥಿತಿಯಿರುವ ಬಿಬಿಎಂಪಿ ಚುನಾವಣೆ ತೀರ್ಪು ನಾಳೆ ಪ್ರಕಟಗೊಂಡ ನಂತರ ಹುಬ್ಬಳ್ಳಿ-ಧಾರವಾಡ ಪಾಲಿಕೆ ತೀರ್ಪು ಹೊರಬೀಳುವ ಸಾಧ್ಯತೆ ದಟ್ಟವಾಗಿದೆ. ಪಾಲಿಕೆಗೆ ಶೀಘ್ರ ಚುನಾವಣೆ ನಡೆಸಲು ಸರ್ಕಾರ ಹಾಗೂ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಬೇಕೆಂದು ಕೋರಿ ಕೆಪಿಸಿಸಿ ಕಾರ್ಯದರ್ಶಿ ನಾಗರಾಜ ಗೌರಿ ಮತ್ತು ಇತರರು ಹೈಕೋಟ್ ವಿಭಾಗೀಯ ಪೀಠದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.