ಧಾರವಾಡ: ರಾಜ್ಯ ಸಚಿವ ಸಂಪುಟ ರಚನೆಯಲ್ಲಿ ಮೂಲ ಬಿಜೆಪಿಗರಲ್ಲಿ ಅಸಮಾಧಾನ ಉಂಟಾಗಿದೆ. ಬಹಳಷ್ಟು ಶಾಸಕರಿಗೆ ಸರ್ಕಾರವೇ ಬೇಡವಾಗಿದೆ. ಚುನಾವಣೆ ನಡೆಸಿ ಸ್ವಂತ ಬಲದ ಮೇಲೆ ಸರ್ಕಾರ ರಚಿಸುವುದು ಒಳ್ಳೆಯದು ಎಂದು ವಿಧಾನ ಪರಿಷತ್ ಸದಸ್ಯ ಶ್ರೀನಿವಾಸ್ ಮಾನೆ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅರ್ಧಕ್ಕಿಂತ ಹೆಚ್ಚು ಸಚಿವ ಸ್ಥಾನ ಖಾಲಿ ಇವೆ. 34 ಸಚಿವ ಸ್ಥಾನಗಳಲ್ಲಿ 18 ಶಾಸಕರಿಗೆ ಮಾತ್ರ ಸಚಿವ ಸ್ಥಾನ ನೀಡಲಾಗಿದೆ. ಉಳಿದ 15 ಸ್ಥಾನ ಖಾಲಿ ಇವೆ. ಇದರ ಅರ್ಥ ಇದು ಸ್ಥಿರ ಸರ್ಕಾರ ಅಲ್ಲ. ಇವರು ಅನರ್ಹರೊಂದಿಗೆ ಮೊದಲೇ ಒಪ್ಪಂದ ಮಾಡಿಕೊಂಡು ಸರ್ಕಾರ ಮಾಡಿದ್ದಾರೆ ಎಂದು ಆರೋಪಿಸಿದರು.
ಅನರ್ಹರು ಕೋರ್ಟ್ ಕೇಸ್ ಮುಗಿಸಿಕೊಂಡು ಸಚಿವರಾಗುತ್ತೇವೆ ಎಂದು ಹೇಳುತ್ತಿದ್ದಾರೆ. ವಾಮ ಮಾರ್ಗದಿಂದ ಬಂದಿರುವ ಸರ್ಕಾರ ಅದೆಷ್ಟು ದಿನ ಉಳಿಯುತ್ತದೆ ಗೊತ್ತಿಲ್ಲವೆಂದು ಮಾನೆ ಹೇಳಿದ್ರು.