ಧಾರವಾಡ: ರಾಜ್ಯ, ರಾಷ್ಟ್ರದ ಆರ್ಥಿಕ ಸ್ಥಿತಿ ನೋಡಿ ಬಜೆಟ್ ವಿಶ್ಲೇಷಣೆ ಮಾಡಬೇಕಿದೆ. ಸರ್ಕಾರದ ವಿಚಾರಗಳನ್ನು ಸತ್ಯದ ರೂಪದಲ್ಲಿ ಹೇಳಬೇಕಿದೆ. ರಾಜ್ಯದಲ್ಲಿ ಆರ್ಥಿಕ ಸ್ಥಿತಿ ಕುಸಿದಿದ್ದರೂ ರಾಜಕೀಯ, ರಾಜಕಾರಣಿಗಳ ಆರ್ಥಿಕ ಬಲ ಜಾಸ್ತಿಯಾಗುತ್ತಿದೆ ಎಂದು ಮಾಜಿ ಸಚಿವ ಹೆಚ್. ವಿಶ್ವನಾಥ್ ಹೇಳಿದ್ದಾರೆ.
ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಎಷ್ಟು ಆಡಂಬರಕ್ಕೆ ಸಿಲುಕಿಕೊಂಡಿದ್ದೇವೆ ಎಂದರೆ ಬಜೆಟ್ ಮಂಡನೆ ದಿನವೇ ರಾಮುಲು ಮನೆ ಮದುವೆ ಅದ್ದೂರಿಯಾಗಿ ನಡೆಯಿತು. ಇನ್ನೊಂದೆಡೆ ಮಾಜಿ ಸಿಎಂ ಕುಮಾರಸ್ವಾಮಿ ಮಗನ ಮದುವೆ ನಡೆಯುತ್ತಿದೆ. ಅದಕ್ಕಾಗಿ 50 ಎಕರೆ ಜಾಗದಲ್ಲಿ ಪೆಂಡಾಲ್ ಹಾಕಲಾಗುತ್ತಿದೆ. ಅವರ ಎಂಗೇಂಜ್‌ಮೆಂಟ್‌ಗೆ ಬೇರೆ ದೇಶದಿಂದ ಹಾರ ತರಿಸಿದ್ರು. ನಮ್ಮ ರಾಜ್ಯದಲ್ಲೇ ಎಂತೆಂಥ ಹೂವುಗಳಿವೆ. ಆದ್ರೆ ನಿಖಿಲ್ಗೆ ತನ್ನ ಎಂಗೇಜ್‌ಮೆಂಟ್‌ಗೆ ಬೇರೆ ದೇಶದ ಹಾರವೇ ಬೇಕಾಗಿತ್ತು ಎಂದು ವ್ಯಂಗ್ಯವಾಡಿದ್ರು.
ಜನರ ಋಣ ತೀರಿಸಲು ಮಗನ ಮದುವೆಗೆ ಸೀರೆ ಇತ್ಯಾದಿ ಕೊಡ್ತಿನಿ ಅಂತಾ ಎಚ್‌ಡಿಕೆ ಹೇಳುತ್ತಿದ್ದಾರೆ. ಜನ ಅವಕಾಶ ಕೊಟ್ಟಾಗ ಸರ್ಕಾರದ ಕಾರ್ಯಕ್ರಮದ ಮೂಲಕ ಜನರ ಅರ್ಥಿಕ ಬಲ ಹೆಚ್ಚಿಸಬೇಕಿತ್ತು. ಅಧಿಕಾರ ಇದ್ದಾಗ ಆ ರೀತಿ ಋಣ ತೀರಿಸಬೇಕಿತ್ತು. ಇದರ ಬಗ್ಗೆ ಮಾಧ್ಯಮಗಳು ವಿಶ್ಲೇಷಣೆ ಮಾಡಬೇಕಿದೆ ಎಂದು ಆಗ್ರಹಿಸಿದರು.
ಎರಡೂವರೆ ಲಕ್ಷ ಕೋಟಿ ರೂ ಗಾತ್ರದ ಬಜೆಟ್ ಮಂಡನೆ ಮಾಡಿದ್ದೇವೆ. ನಾಲ್ಕು ಲಕ್ಷ ಕೋಟಿ ರೂ ಹತ್ತಿರ ಸಾಲ ತಂದಿದ್ದೇವೆ. ಸಾಲಕ್ಕೆ ಬಡ್ಡಿ ಕಟ್ಟೋಕೆ ಆಗುತ್ತಾ? ಅಧಿಕಾರಿಗಳ, ನೌಕರರ ಸಂಬಳಕ್ಕಾಗಿಯೇ 24 ಸಾವಿರ ಕೋಟಿ ಹೋಗುತ್ತಿದೆ. ಇಂದು ಜನಕ್ಕೆ ಸತ್ಯ ತಿಳಿಸಬೇಕಾಗಿದೆ. ಯಡಿಯೂರಪ್ಪ ಕೆಲವು ಸತ್ಯದ ಹತ್ತಿರಕ್ಕೆ ಹೋಗಿ ಮಾತನಾಡಿದ್ದಾರೆ ಎಂದು ಬಿಎಸ್ವೈ ಹೊಗಳಿದರು.
ಒಂದೆಡೆ ಸಾಲದ ಶೂಲ ಜಾಸ್ತಿ ಆಗುತ್ತಿದೆ. ಮತ್ತೊಂದೆಡೆ, ಬಜೆಟ್ ತೂಕವೂ ಜಾಸ್ತಿ ಆಗಿದೆ. ದೆಹಲಿ ಸಿಎಂ ಜನರಿಗೆ ಬಸ್, ವಿದ್ಯುತ್, ನೀರು ಉಚಿತ ಕೊಟ್ಟಿದ್ದಾರೆ. ಆದರೆ, ದುಂದು ವೆಚ್ಚವನ್ನು ಕಡಿಮೆ ಮಾಡುವ ಸರ್ಕಾರ ಬೇಕಾಗಿದೆ ಎಂದರು.