ಧಾರವಾಡ: ತಾಲೂಕಿನ ಹಂಗರಕಿ ಗ್ರಾಮದಲ್ಲಿ ಗ್ರಾಮ ಪಂಚಾಯಿತಿ ವ್ಯವಸ್ಥೆ ಜಾರಿಯಾದಾಗಿನಿಂದಲೂ ಇದೇ ಮೊದಲ ಬಾರಿಗೆ ಮತದಾನ ನಡೆಯುತ್ತಿದೆ. ಈ ಬಾರಿ ತಮ್ಮ ಅಮೂಲ್ಯ ಮತ ಚಲಾಯಿಸುವ ಮೂಲಕ ತಮಗಿಷ್ಟವಾದ ನಾಯಕನನ್ನು ಆಯ್ಕೆ ಮಾಡುವ ಹಕ್ಕನ್ನು ಈ ಗ್ರಾಮಸ್ಥರು ಪಡೆದಿದ್ದಾರೆ.
ಧಾರವಾಡ ಗ್ರಾಮೀಣ ಕ್ಷೇತ್ರದ ಶಾಸಕ ಅಮೃತ ದೇಸಾಯಿ ಅವರ ಸ್ವಂತ ಗ್ರಾಮ ಹಂಗರಕಿ. ಇಲ್ಲಿ ಗ್ರಾಮ ಪಂಚಾಯಿತಿ ವ್ಯವಸ್ಥೆ ಬಂದಾಗಿನಿಂದಲೂ ಮತದಾನ ನಡೆಸದೇ ಅವಿರೋಧವಾಗಿ ಸದಸ್ಯರನ್ನು ಆಯ್ಕೆ ಮಾಡಲಾಗುತ್ತಿತ್ತು. ಆದರೆ ಈ ಬಾರಿ ಹಂಗರಕಿ ಗ್ರಾಮಸ್ಥರು ಇದೇ ಮೊದಲ ಬಾರಿಗೆ ಮತ ಚಲಾಯಿಸಿ ತಮಗಿಷ್ಟವಾದ ಅಭ್ಯರ್ಥಿ ಆಯ್ಕೆ ಮಾಡುವ ಅವಕಾಶ ಪಡೆದಿದ್ದಾರೆ.
ಈ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಹಂಗರಕಿ, ದುಬ್ಬದ ಮರಡಿ ಹಾಗೂ ಖಾನಾಪೂರ ಪಂಚಾಯಿತಿ ಸೇರಿವೆ. ಇದರಲ್ಲಿ 19 ಜನ ಅಭ್ಯರ್ಥಿಗಳು ಕಣದಲ್ಲಿದ್ದು, ಪ್ರತಿ ವರ್ಷ ಹಂಗರಕಿ ಹೊರತುಪಡಿಸಿ ಎಲ್ಲಾ ಗ್ರಾಮಗಳಲ್ಲಿ ಚುನಾವಣೆ ನಡೆಯುತ್ತಿತ್ತು. ಆದರೆ ಈ ಬಾರಿ ಹಂಗರಕಿಯಲ್ಲಿಯೂ ಚುನಾವಣೆ ನಡೆಯುತ್ತಿರುವುದು ವಿಶೇಷ.
ಓದಿ: ಮಂಗಳೂರಿನಲ್ಲೂ ಕೇರಳ ಮಾದರಿ ದೋಣಿ ವಿಹಾರ ಆರಂಭ
6 ಜನ ಸದಸ್ಯ ಬಲ ಹೊಂದಿರುವ ಈ ಗ್ರಾಮದಲ್ಲಿ, ನಿವೃತ್ತ ಯೋಧ ಸೇರಿದಂತೆ ಒಟ್ಟು 12 ಜನ ಚುನಾವಣೆಯಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದು, ಹಂಗರಕಿ ಮತದಾರರು ಯಾರತ್ತ ಒಲವು ತೋರುತ್ತಾರೆ ಎಂದು ಕಾದು ನೋಡಬೇಕಿದೆ.