ಹುಬ್ಬಳ್ಳಿ: ಗ್ರಾಮ ಪಂಚಾಯಿತಿಯ ಎರಡನೇ ಹಂತದ ಸಾರ್ವತ್ರಿಕ ಚುನಾವಣೆ ನಾಳೆ ನಡೆಯಲಿದ್ದು, ಸಿಬ್ಬಂದಿ ನೇಮಿಸುವ ಕಾರ್ಯ ನಗರದ ಲ್ಯಾಮಿಂಗ್ಟನ್ ಶಾಲೆಯಲ್ಲಿ ಜರುಗುತ್ತಿದೆ.
ಹುಬ್ಬಳ್ಳಿ ತಾಲೂಕಿನ 26 ಗ್ರಾಮ ಪಂಚಾಯಿತಿಯ ಒಟ್ಟು 124 ಮತಕ್ಷೇತ್ರಗಳಿಂದ 348 ಗ್ರಾಮ ಪಂಚಾಯತಿ ಸದಸ್ಯರ ಆಯ್ಕೆಗೆ ನಾಳೆ ಮತದಾನ ಜರುಗಲಿದೆ. 1036 ಅಭ್ಯರ್ಥಿಗಳು ಚುನಾವಣೆ ಕಣದಲ್ಲಿದ್ದು, 159 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಮಂಟೂರು ಗ್ರಾಮದ ಒಂದು ಮತಕ್ಷೇತ್ರಕ್ಕೆ ಅವಿರೋಧವಾಗಿ ಅಭ್ಯರ್ಥಿ ಆಯ್ಕೆಯಾಗಿದ್ದಾರೆ. ಮಲ್ಲಿಗವಾಡ ಗ್ರಾಮದ 2 ಮತಕ್ಷೇತ್ರಗಳಲ್ಲಿ ಅಭ್ಯರ್ಥಿಗಳು ನಾಮಪತ್ರಗಳನ್ನು ಹಿಂಪಡೆದಿದ್ದಾರೆ. ಒಟ್ಟು 57,821 ಪುರುಷ, 55,984 ಮಹಿಳೆ, 1 ಇತರೆ ಸೇರಿದಂತೆ 1,13,806 ಮತದಾರರು ಇದ್ದಾರೆ.
ಈ ಚುನಾವಣೆಯಲ್ಲಿ 30 ಸೂಕ್ಷ್ಮ, 17 ಅತೀ ಸೂಕ್ಷ್ಮ ಮತಗಟ್ಟೆಗಳನ್ನು ಗುರುತಿಸಲಾಗಿದೆ ಹಾಗೂ 16 ಸೆಕ್ಟರ್, 38 ರೂಟ್ಗಳನ್ನು ಗುರುತಿಸಲಾಗಿದ್ದು, ಚುನಾವಣೆ ಸಿಬ್ಬಂದಿ, ಮತಪತ್ರ, ಮತಪೆಟ್ಟೆಗಳನ್ನು ಆಯಾ ಮತಗಟ್ಟೆಗಳಿಗೆ ಕೊಂಡೊಯ್ಯಲು 25 ಸರ್ಕಾರಿ ಬಸ್, 6 ಶಾಲಾ ಬಸ್ ನಿಯೋಜಿಸಲಾಗಿದೆ.
ಪೊಲೀಸ್ ಸಿಬ್ಬಂದಿ ನೇಮಕ:
ಗ್ರಾ.ಪಂ. ಚುನಾವಣೆ ಮತದಾನಕ್ಕೆ ಅಗತ್ಯ ಬಂದೋಬಸ್ತ್ ಕೈಗೊಳ್ಳಲಾಗಿದ್ದು, ಹುಬ್ಬಳ್ಳಿ ತಾಲೂಕಿನಲ್ಲಿ 300 ಪೊಲೀಸ್ ಸಿಬ್ಬಂದಿಯನ್ನು ನೇಮಕ ಮಾಡಲಾಗಿದೆ. ಓರ್ವ ಡಿವೈಎಸ್ಪಿ, 4-ಸಿ.ಪಿ.ಐ, 4-ಪಿ.ಎಸ್.ಐ, 20-ಎ.ಎಸ್.ಐ, 150-ಪೊಲೀಸ್ ಕಾನಸ್ಟೇಬಲ್, 65-ಕಾರಾಗೃಹ ಭದ್ರತಾ ಸಿಬ್ಬಂದಿ, 34-ಹೋಮ್ ಗಾರ್ಡ್ಗಳು ಮತದಾನ ಭದ್ರತಾ ಕಾರ್ಯದಲ್ಲಿ ಕರ್ತವ್ಯ ನಿರ್ವಹಿಸಲಿದ್ದಾರೆ. ಅದಲ್ಲದೆ, 2-ಕೆ.ಎಸ್.ಆರ್.ಪಿ, 3-ಡಿ.ಎ.ಆರ್ ತುಕಡಿಗಳನ್ನು ಸನ್ನದ್ಧವಾಗಿರಿಸಲಾಗಿದೆ.
ಆರೋಗ್ಯ ಸಿಬ್ಬಂದಿ ನೇಮಕ:
ಕೋವಿಡ್-19 ಹಿನ್ನೆಲೆ, ಮತಗಟ್ಟೆಗಳಲ್ಲಿ ಅಗತ್ಯ ಮುಂಜಾಗೃತೆ ಕ್ರಮಗಳನ್ನು ಕೈಗೊಳ್ಳಲಾಗಿದ್ದು, 162 ಆರೋಗ್ಯ ಸಿಬ್ಬಂದಿಗಳನ್ನು ಮತದಾನ ಜರುಗುವ ಬೂತ್ಗಳಿಗೆ ನೇಮಿಸಲಾಗಿದೆ. ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿನ ಮತಗಟ್ಟೆಗಳಿಗೆ ವೈದ್ಯಾಧಿಕಾರಿಗಳನ್ನು ಚುನಾವಣಾ ನೋಡಲ್ ಅಧಿಕಾರಿಗಳನ್ನಾಗಿ ನೇಮಿಸಲಾಗಿದೆ.
ಸಾಮಾಜಿಕ ಅಂತರ, ಥರ್ಮಲ್ ಸ್ಕ್ರೀನಿಂಗ್, ಹ್ಯಾಂಡ್ ಸ್ಯಾನಿಟೈಸೇಶನ್ಗಳನ್ನು ಕಡ್ಡಾಯಗೊಳಿಸಲಾಗಿದೆ.