ಧಾರವಾಡ/ಮಂಗಳೂರು: ಗ್ರಾಮ ಪಂಚಾಯಿತಿ ಚುನಾವಣೆ ಜರುಗುತ್ತಿರುವ ಹಿನ್ನೆಲೆ ಧಾರವಾಡ ಹಾಗೂ ಮಂಗಳೂರು ಜಿಲ್ಲೆಗಳಲ್ಲಿನ ಗ್ರಾಮಾಂತರ ವ್ಯಾಪ್ತಿಯಲ್ಲಿ ಶಸ್ತ್ರಾಸ್ತ್ರಗಳನ್ನು ಹೊಂದಿರುವ ಲೈಸನ್ಸ್ದಾರರು ಆಯುಧಗಳನ್ನು ತಕ್ಷಣ ತಮ್ಮ ವ್ಯಾಪ್ತಿಯ ಪೊಲೀಸ್ ಠಾಣೆಯಲ್ಲಿ ಠೇವಣಿ ಮಾಡುವಂತೆ ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಆದೇಶಿಸಿದ್ದು, ಮಂಗಳೂರಿನಲ್ಲಿ ಕೆಲ ಅರ್ಹ ಪ್ರಕರಣಗಳಲ್ಲಿ ಇದಕ್ಕೆ ವಿನಾಯಿತಿ ನೀಡಲು ನಿರ್ಧರಿಸಲಾಗಿದೆ.
ರಾಜ್ಯ ಚುನಾವಣಾ ಆಯೋಗದ ನಿಯಮದಂತೆ ಶಸ್ತ್ರಾಸ್ತ್ರಗಳನ್ನು ಠೇವಣಿ ಇಡಬೇಕಾಗಿರುವುದು ಕಡ್ಡಾಯವಾಗಿದೆ. ಹಾಗಾಗಿ ಎಲ್ಲಾ ಲೈಸನ್ಸ್ದಾರರು ಹೊಂದಿರುವ ಆಯುಧಗಳನ್ನು ಜೊತೆಗಿಟ್ಟುಕೊಂಡು ತಿರುಗಾಡುವುದನ್ನು ನಿಷೇಧಿಸಲಾಗಿದೆ. ಆಯುಧಗಳನ್ನು ಠೇವಣಿ ಮಾಡಿದ ಬಗ್ಗೆ ಅಗತ್ಯ ಸ್ವೀಕೃತಿ ಪತ್ರ ನೀಡಲು ಮತ್ತು ಚುನಾವಣೆ ಪ್ರಕ್ರಿಯೆ ಮುಗಿದು ಫಲಿತಾಂಶ ಹೊರಬಿದ್ದ ಒಂದು ವಾರದ ನಂತರ ಸಂಬಂಧಿಸಿದವರಿಗೆ ಆಯುಧಗಳನ್ನು ವಾಪಸ್ ನೀಡಲು ಕ್ರಮ ತೆಗೆದುಕೊಳ್ಳಲು ಧಾರವಾಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಜಿಲ್ಲಾ ದಂಡಾಧಿಕಾರಿಗಳು ನಿರ್ದೇಶಿಸಿದ್ದಾರೆ.
ಈ ಆದೇಶ ಸರ್ಕಾರಿ ಸೇವೆಯಲ್ಲಿ ನಿರತರಾಗಿರುವ ಅಧಿಕಾರಿ, ಸಿಬ್ಬಂದಿಗೆ ಅನ್ವಯಿಸುವುದಿಲ್ಲ. ಬ್ಯಾಂಕ್ ಹಾಗೂ ಖಾಸಗಿ ಸಂಸ್ಥೆಗಳ ಸುರಕ್ಷತೆಗಾಗಿ ರಾಷ್ಟ್ರೀಕೃತ ಅಥವಾ ಸಂಸ್ಥೆಯ ಬ್ಯಾಂಕುಗಳಿಗೆ ಅನ್ವಯಿಸುವುದಿಲ್ಲ ಎಂದು ಧಾರವಾಡ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದ್ದಾರೆ.
ಇನ್ನು ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದ.ಕ ಜಿಲ್ಲಾಧಕಾರಿ ಡಾ. ಕೆ.ವಿ.ರಾಜೇಂದ್ರ, ಗ್ರಾಮ ಪಂಚಾಯಿತಿ ಚುನಾವಣೆ ನಡೆಯುವ ಪ್ರದೇಶದಲ್ಲಿ ಶಸ್ತ್ರಾಸ್ತ್ರಗಳನ್ನು ಆಯಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಠೇವಣಿ ಇಡುವುದು ಕಡ್ಡಾಯ. ಆದರೆ ಆಯಾ ಜಿಲ್ಲೆಗೆ ಸಂಬಂಧಿಸಿದಂತೆ ಕೆಲ ನಿರ್ಧಾರಗಳನ್ನು ತೆಗೆದುಕೊಳ್ಳಲು ಚುನಾವಣಾ ಆಯೋಗ ತಿಳಿಸಿದಂತೆ ಕೆಲ ಅರ್ಹ ಪ್ರಕರಣಗಳಲ್ಲಿ ಶಸ್ತ್ರಾಸ್ತ್ರ ಠೇವಣಿ ಇಡುವುದರಲ್ಲಿ ವಿನಾಯಿತಿ ಘೋಷಿಸಲಾಗಿದೆ ಎಂದರು.
ಬೆಳೆ ರಕ್ಷಣೆಗಾಗಿ ಶಸ್ತ್ರಾಸ್ತ್ರದ ತೀರಾ ಅವಶ್ಯಕತೆ ಇದ್ದರೆ ಸಂಬಂಧಪಟ್ಟವರು ಪೂರಕ ದಾಖಲೆಗಳೊಂದಿಗೆ ಸಂಬಂಧಪಟ್ಟ ತಾಲೂಕಿನ ತಹಶೀಲ್ದಾರರಿಗೆ ಅಹವಾಲು ಡಿಸೆಂಬರ್ 10ರೊಳಗೆ ಸಲ್ಲಿಸಬೇಕು. ಇದನ್ನು ತಹಶೀಲ್ದಾರರ ಕಚೇರಿಯ ಸ್ಕ್ರೀನಿಂಗ್ ಸಮಿತಿ ಪರಿಶೀಲಿಸಿ ಕ್ರಿಮಿನಲ್ ಪ್ರಕರಣಗಳು ಇಲ್ಲದಿದ್ದರೆ ಶಸ್ತ್ರಾಸ್ತ್ರಗಳ ಅಗತ್ಯವಿದ್ದರೆ ಹಿಂದಿರುಗಿಸಲಾಗುತ್ತದೆ ಎಂದರು.