ಹುಬ್ಬಳ್ಳಿ : ಕಳೆದ ಜುಲೈ ತಿಂಗಳಲ್ಲಿ ಬರ್ಬರವಾಗಿ ಹತ್ಯೆಯಾದ ಗಂಗಿವಾಳ ಗ್ರಾಮ ಪಂಚಾಯತ್ ಸದಸ್ಯ ದೀಪಕ ಪಟದಾರಿ ಹತ್ಯೆಗೆ ಸಂಬಂಧಿಸಿದಂತೆ ಪೊಲೀಸರ ವಿರುದ್ಧವೇ ಗಂಭೀರ ಆರೋಪ ಕೇಳಿ ಬಂದಿದೆ. ಹತ್ಯೆಯಾದ ದೀಪಕ ಪಟದಾರಿಯ ಕುಟುಂಬ ಸದಸ್ಯರು ಪೊಲೀಸರ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಈ ಬಗ್ಗೆ ಮೃತನ ಕುಟುಂಬ ನ್ಯಾಯಕ್ಕಾಗಿ ಪೊಲೀಸ್ ಕಮೀಷನರ್ ಕಚೇರಿಯ ಮೆಟ್ಟಿಲೇರಿದ್ದಾರೆ.
ಘಟನೆಯ ಹಿನ್ನೆಲೆ: ಕಳೆದ ಜುಲೈನಲ್ಲಿ ಗಂಗಿವಾಳ ಗ್ರಾಮ ಪಂಚಾಯತ್ ಸದಸ್ಯ ದೀಪಕ ಪಟದಾರಿಯ ಹತ್ಯೆಯಾಗಿತ್ತು.ಕೆಲ ದುಷ್ಕರ್ಮಿಗಳು ಗ್ರಾಪಂ ಸದಸ್ಯನನ್ನು ಬರ್ಬರವಾಗಿ ಹತ್ಯೆ ಮಾಡಿದ್ದರು. ಇದೀಗ ಈ ಹತ್ಯೆಗೆ ಸಂಬಂಧಿಸಿದಂತೆ ಹೊಸ ತಿರುವು ಸಿಕ್ಕಿದೆ. ಹತ್ಯೆಯ ಹಿಂದೆ ಪೊಲೀಸರ ಕೈವಾಡ ಇದೆ ಎಂಬ ಗಂಭೀರ ಆರೋಪವನ್ನು ಮೃತ ದೀಪಕ್ ಸಂಬಂಧಿಕರು ಮಾಡಿದ್ದಾರೆ.
ದೀಪಕ್ ಕೊಲೆಯಾಗುವ ಹದಿನೈದು ದಿನಕ್ಕೂ ಮೊದಲು, ಪೊಲೀಸ್ ಅಧಿಕಾರಿಯೊಬ್ಬರು ಎಚ್ಚರಿಕೆಯಿಂದ ಇರುವಂತೆ ಮೆಸೇಜ್ ಕಳುಹಿಸಿರುವುದು ಆರೋಪಕ್ಕೆ ಪುಷ್ಟಿ ನೀಡುವಂತಿದೆ. ದೀಪಕ್ ಕೊಲೆ ಪ್ರಕರಣ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು, ಪ್ರಕರಣ ಸಂಬಂಧ ಪೊಲೀಸರು ಕೆಲವರನ್ನು ಬಂಧಿಸಿದ್ದಾರೆ.
ಆದರೆ, ಕೊಲೆಗೆ ಕಾರಣವಾದ ಪ್ರಮುಖ ಆರೋಪಿಗಳನ್ನು ಇನ್ನೂ ಬಂಧಿಸಿಲ್ಲ. ಪೊಲೀಸರೇ ಅವರಿಗೆ ಬೆಂಬಲವಾಗಿ ನಿಂತಿದ್ದಾರೆ. ಕೊಲೆ ನಡೆದು ಮೂರು ತಿಂಗಳು ಕಳೆದರೂ ಪ್ರಮುಖ ಆರೋಪಿಗಳು ರಾಜಾರೋಷವಾಗಿ ಓಡಾಡುತ್ತಿದ್ದಾರೆ. ಈ ನಡುವೆ ಪರಶುರಾಮ್ ಕಾಳೆ ಹಾಗೂ ನಾಗಾರಾಜ್ ಕೆಂಚಮ್ಮನವರ ಸಾಕ್ಷಿ ನಾಶ ಮಾಡಿದ್ದಾರೆ ಎಂದು ಮೃತನ ಸಹೋದರ ಸಂಜಯ್ ಪಟೀದಾರ್ ಆರೋಪಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಕಾನೂನು ಸುವ್ಯವಸ್ಥೆ ಡಿಸಿಪಿ ಸಾಹಿಲ್ ಬಾಗ್ಲಾ ಪ್ರಕರಣದ ತನಿಖೆ ನಡೆಯುತ್ತಿದೆ. ಅಂತಿಮ ಹಂತದ ತನಿಖೆ ನಡೆಯುತ್ತಿದೆ.ತಪ್ಪಿತಸ್ಥರಿಗೆ ತಕ್ಕ ಶಿಕ್ಷೆಯಾಗುತ್ತದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ : ಆಯತಪ್ಪಿ ಬೈಕ್ನಿಂದ ಬಿದ್ದ ಸವಾರ, ರಸ್ತೆಯಲ್ಲಿ ಚೆಲ್ಲಿದ ಮಾಂಸ: ಗೋಮಾಂಸ ಕಂಡು ಬೈಕ್ಗೆ ಬೆಂಕಿ ಇಟ್ಟ ಸ್ಥಳೀಯರು