ಹುಬ್ಬಳ್ಳಿ: ಕುಂದಗೋಳ ತಾಲೂಕಿನ ಗೌಡಗೇರಿ ಗ್ರಾಮ ಪಂಚಾಯತಿಯ ಪ್ರಭಾರಿ ಪಿಡಿಒ ಹಾಗೂ ಗ್ರೇಡ್-1 ಕಾರ್ಯದರ್ಶಿ ಸಹದೇವ್ ಮಹಾಲೆ ಅವರನ್ನು ಅಮಾನತು ಮಾಡಿ ಜಿಲ್ಲಾ ಪಂಚಾಯತ್ ಸಿಇಒ ಬಿ.ಸಿ ಸತೀಶ್ ಆದೇಶ ಹೊರಡಿಸಿದ್ದಾರೆ.
ಪ್ರಭಾರಿ ಪಿಡಿಒ ಸಹದೇವ್ ಮಹಾಲೆ, ಕರ್ತವ್ಯಲೋಪವೆಸಗಿರುವ ಕಾರಣದಿಂದಾಗಿ ಕರ್ನಾಟಕ ನಾಗರಿಕ ಸೇವಾ (ನಡತೆ) ನಿಯಮಗಳು 1966ರ ನಿಯಮ 3(1) ಉಲ್ಲಂಘಿಸಿದ ಹಿನ್ನೆಲೆಯಲ್ಲಿ, ಇಲಾಖಾ ವಿಚಾರಣೆ ಕಾಯ್ದಿರಿಸಿ ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ.
ಇವರ ಕಾರ್ಯ ಪ್ರಭಾರವನ್ನು ಬೇರೆ ಪಂಚಾಯತಿ ಅಭಿವೃದ್ಧಿ ಅಧಿಕಾರಿಗೆ ವಹಿಸುವ ಕುರಿತು ಕುಂದಗೋಳ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿಗಳು ಸೂಕ್ತ ಕ್ರಮ ಜರುಗಿಸಬೇಕು. ಅಮಾನತುಗೊಂಡ ನೌಕರ ಜೀವನಾಂಶ ಭತ್ಯೆಗೆ ಅರ್ಹರಿರುತ್ತಾರೆ ಹಾಗೂ ಮೇಲಾಧಿಕಾರಿಗಳ ಪೂರ್ವಾನುಮತಿ ಪಡೆಯದೇ ಕೇಂದ್ರಸ್ಥಾನ ಬಿಡಬಾರದು ಎಂದು ಆದೇಶದಲ್ಲಿ ತಿಳಿಸಲಾಗಿದೆ.