ಧಾರವಾಡ: ಉನ್ನತ ಶಿಕ್ಷಣವು ಏಕ ಭಾರತ, ಶ್ರೇಷ್ಠ ಭಾರತ ಹಾಗೂ ಆತ್ಮನಿರ್ಭರ ಭಾರತ ನಿರ್ಮಿಸಲು ಪೂರಕವಾಗಬೇಕು. ಪದವೀಧರರು ದೇಶದ ಜನಸಾಮಾನ್ಯರ ಬದುಕಿನ ವಿಕಾಸಕ್ಕೆ ಕೊಡುಗೆಗಳನ್ನು ನೀಡಬೇಕು ಎಂದು ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಹೇಳಿದರು.
ಕವಿವಿ ಗಾಂಧಿ ಭವನದಲ್ಲಿ ನಡೆದ 72 ನೇ ವಾರ್ಷಿಕ ಘಟಿಕೋತ್ಸವದಲ್ಲಿ ಮಾತನಾಡಿದ ಅವರು, ಕರ್ನಾಟಕ ವಿವಿಯು 73 ವರ್ಷಗಳಿಗೂ ಅಧಿಕ ಕಾಲದಿಂದ ಶಿಕ್ಷಣ ಹಾಗೂ ದೇಶದ ವಿಕಾಸಕ್ಕೆ ತನ್ನ ಕೊಡುಗೆಗಳನ್ನು ನೀಡಿದೆ. ಇಲ್ಲಿ ವ್ಯಾಸಂಗ ಮಾಡಿದ ಅನೇಕರು ಉನ್ನತ ಸಾಧನೆ ಮಾಡಿದ್ದಾರೆ. ನಾವು ನಮ್ಮ ಕ್ಷೇತ್ರಗಳಲ್ಲಿ ಉತ್ತಮ ಕಾರ್ಯ ಮಾಡಿ ಜನಸಾಮಾನ್ಯರ ಬದುಕಿನ ಏಳ್ಗೆಗೆ ಕಾರಣರಾಗಬೇಕು. ಜೀವನ ಸಾರ್ಥಕ ಪಡಿಸಿಕೊಳ್ಳಲು ನಿಮ್ಮ ಶಿಕ್ಷಣ ವರದಾನವಾಗಿದೆ ಎಂದರು.
ಏಕ ಭಾರತ, ಶ್ರೇಷ್ಠ ಭಾರತ, ಆತ್ಮ ನಿರ್ಭರ ಭಾರತ ನಿರ್ಮಾಣಕ್ಕೆ ಉನ್ನತ ಶಿಕ್ಷಣ ಪಡೆದವರ ಕೊಡುಗೆ ಅಧಿಕವಾಗಿ ಪ್ರಾಪ್ತಿಯಾಗಬೇಕು. ಶಿಕ್ಷಣದ ಪ್ರಸಾರದ ಜೊತೆಗೆ ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯಬೇಕು. ಭಾರತ ಸರ್ಕಾರದ ನೂತನ ಶಿಕ್ಷಣ ನೀತಿಯು ಸ್ಥಳೀಯ ಭಾಷೆಗಳು, ಕ್ರೀಡೆಗೆ ಆದ್ಯತೆ ಇದೆ. ಕ್ರೀಡೆಗಳ ಮೂಲಕ ಆರೋಗ್ಯ ಭಾರತ, ಸದೃಢ ಕರ್ನಾಟಕ ಕಟ್ಟಬೇಕು ಎಂದರು.
ಅನ್ನದಾಸೋಹ, ವಿದ್ಯಾದಾಸೋಹದ ಮೂಲಕ ಜನಮನ್ನಣೆ ಪಡೆದ ಧಾರವಾಡದ ಪ್ರತಿಷ್ಠಿತ ಮುರುಘಾಮಠದ ಮಲ್ಲಿಕಾರ್ಜುನ ಸ್ವಾಮೀಜಿ ಸೇರಿದಂತೆ ಮೂವರಿಗೆ ಕರ್ನಾಟಕ ವಿಶ್ವವಿದ್ಯಾಲಯವು ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಿದೆ. ರಾಜ್ಯಪಾಲರಾದ ಥಾವರ್‌ಚಂದ್ ಗೆಹ್ಲೋಟ್ ಅವರು ಡಾಕ್ಟರೇಟ್ ಪದವಿ ಪ್ರದಾನ ಮಾಡಿದರು.
ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ, ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಸೇವೆ ಪರಿಗಣಿಸಿ ಮಲ್ಲಿಕಾರ್ಜುನ ಸ್ವಾಮೀಜಿಗೆ ಡಾಕ್ಟರ್ ಆಫ್ ಲೆಟರ್ಸ್ ಗೌರವ ಪದವಿ, ಖ್ಯಾತ ವಿಜ್ಞಾನಿ, ಶಿಕ್ಷಣ ತಜ್ಞರಾದ ಪ್ರೊ.ಶ್ರೀನಿವಾಸ ಸೈದಾಪುರ ಅವರಿಗೆ ಡಾಕ್ಟರ್ ಆಫ್ ಸೈನ್ಸ್ ಪದವಿ ಮತ್ತು ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಯಿತು. ಸುಪ್ರೀಂಕೋರ್ಟ್‌ನ ಹಿರಿಯ ನ್ಯಾಯವಾದಿ ಮನೋಜ ಗೋರಕೆಲಾ ಅವರಿಗೆ ನ್ಯಾಯಾಂಗ ಹಾಗೂ ಉನ್ನತ ಶಿಕ್ಷಣ ಕ್ಷೇತ್ರದಲ್ಲಿನ ಸೇವೆ ಪರಿಗಣಿಸಿ ಡಾಕ್ಟರ್ ಆಫ್ ಲಾ ಎಂಬ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಯಿತು.
ಓದಿ: ಕೇರಳ ಪೊಲೀಸರಿಂದ ಸಾರ್ವಜನಿಕರಿಗೆ ಬಂದೂಕು ತರಬೇತಿಗಾಗಿ ಪಠ್ಯಕ್ರಮ ಅಭಿವೃದ್ಧಿ!