ಧಾರವಾಡ: ಕೃಷಿಕರಿಗೆ, ಕೂಲಿ ಕಾರ್ಮಿಕರಿಗೆ, ಗ್ರಾಮೀಣ ಜನರಿಗೆ ಅನುಕೂಲವಾಗುವಂತೆ ಸರ್ಕಾರ ವಿವಿಧ ರೀತಿಯ ಯೋಜನೆಗಳನ್ನು ರೂಪಿಸಿದ್ದು, ಅವುಗಳು ಅರ್ಹ ಫಲಾನುಭವಿಗಳಿಗೆ ಮುಟ್ಟುವಂತೆ ಮುತುವರ್ಜಿ ವಹಿಸಬೇಕು ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ವಿಜಯಲಕ್ಷ್ಮಿ ಪಾಟೀಲ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಜಿಲ್ಲಾಮಟ್ಟದ ಅಧಿಕಾರಿಗಳ ವಿಶೇಷ ಸಭೆಯಲ್ಲಿ ಮಾತನಾಡಿದ ಅವರು, ಕೊರೊನಾ ವೈರಸ್ ಹರಡದಂತೆ ತಡೆಗಟ್ಟಲು ಲಾಕ್‍ಡೌನ್ ವಿಧಿಸಿದ್ದರಿಂದ ಗ್ರಾಮದ ಜನರು ಹಳ್ಳಿಗಳಲ್ಲೇ ಉಳಿದಿದ್ದಾರೆ. ಇದರಿಂದಾಗಿ ಗ್ರಾಮೀಣ ಭಾಗದಲ್ಲಿ ಹೆಚ್ಚು ಹೆಚ್ಚು ಕೃಷಿಗೆ ಪೂರಕವಾದ ಚಟುವಟಿಕೆಗಳು ಆರಂಭಗೊಂಡಿವೆ. ರೈತರಿಗೆ ಬೀಜ, ರಸಗೊಬ್ಬರ ಕೊರತೆ ಆಗದಂತೆ ಮುನ್ನೆಚ್ಚರಿಕೆ ವಹಿಸಬೇಕು. ಕೂಲಿ ಕಾರ್ಮಿಕರಿಗೆ, ಜಮೀನು ರಹಿತ ಕುಟುಂಬಗಳಿಗೆ ಮತ್ತು ಉದ್ಯೋಗ ಬಯಸುವವರಿಗೆ ಪೂರಕವಾದ ಮಾನವ ದಿನಗಳನ್ನ ನೀಡಿ, ಉದ್ಯೋಗ ಕಲ್ಪಿಸಬೇಕು ಎಂದು ಸೂಚಿಸಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಬಿ.ಸಿ.ಸತೀಶ್ ಮಾತನಾಡಿ, ಬಹುತೇಕ ಇಲಾಖೆ ಯೋಜನೆಗಳು ಸಾರ್ವಜನಿಕರಿಗೆ ಸದ್ಬಳಕೆ ಆಗುವಂತೆ ಅನುಷ್ಠಾನಗೊಳ್ಳುತ್ತಿವೆ. ಕೊವಿಡ್-19 ಲಾಕ್‍ಡೌನ್ ಹಿನ್ನೆಲೆಯಲ್ಲಿ ಬಹುತೇಕ ಎಲ್ಲಾ ಇಲಾಖೆ ಸಿಬ್ಬಂದಿ ಕೊರೊನಾ ನಿಯಂತ್ರಣದ ಕರ್ತವ್ಯಕ್ಕೆ ಹಾಜರಾಗಿದ್ದರಿಂದ ಯೋಜನೆಗಳ ಪ್ರಗತಿಯಲ್ಲಿ ಸಾಧನೆ ವ್ಯತ್ಯಾಸವಾಗಿದೆ. ಎಂ.ಜಿ.ಎನ್.ಆರ್.ಜಿ. ಯೋಜನೆ ಮೂಲಕ ಕೃಷಿಕರಿಗೆ, ಕೂಲಿ ಕಾರ್ಮಿಕರಿಗೆ ಅಗತ್ಯ ಉದ್ಯೋಗ ನೀಡಲು ಕ್ರಮ ಕೈಗೊಳ್ಳಲಾಗಿದೆ. ರೈತರ ಜಮೀನುಗಳಲ್ಲಿ ಕೃಷಿ ಹೊಂಡ ನಿರ್ಮಾಣ, ಬದು ನಿರ್ಮಾಣ, ಬಸಿಗಾಲುವೆ ನಿರ್ಮಾಣ ಸೇರಿದಂತೆ ಮಳೆ ನೀರು ಸಂರಕ್ಷಣೆ ಮತ್ತು ಅಂತರ್ಜಲ ಹೆಚ್ಚಳಕ್ಕೆ ಆದ್ಯತೆ ನೀಡಲಾಗಿದೆ ಎಂದು ತಿಳಿಸಿದರು.