ಹುಬ್ಬಳ್ಳಿ: ಮಹದಾಯಿ ವಿಚಾರದಲ್ಲಿ ಮತ್ತೆ ಗೋವಾ ಸರ್ಕಾರದಿಂದ ಕ್ಯಾತೆ ಶುರುವಾಗಿದೆ. ಕಳಸಾ ಬಂಡೂರಿ ನಾಲೆಗಳ ಮೂಲಕ ನೀರನ್ನು ಅಕ್ರಮವಾಗಿ ತಿರುಗಿಸಲಾಗುತ್ತಿದೆ ಎಂದು ಆರೋಪ ಮಾಡಿರುವ ಗೋವಾ ಸರ್ಕಾರ, ಕರ್ನಾಟಕದ ವಿರುದ್ಧ ಸುಪ್ರೀಂ ಕೋರ್ಟ್ ಗೆ ನ್ಯಾಯಾಂಗ ನಿಂದನೆ ಮೊಕದ್ದಮೆ ದಾಖಲಿಸುವ ಮೂಲಕ ಉದ್ಧಟತನ ಮೆರೆದಿದೆ.
ಕರ್ನಾಟಕ ನೀರು ತಿರುಗಿಸಿದೆ ಎನ್ನಲಾದ ವಿಡಿಯೋ ಸಾಕ್ಷ್ಯಗಳನ್ನಿಟ್ಟುಕೊಂಡು ಕೋರ್ಟ್ ಮೆಟ್ಟಿಲೇರಿದ ಗೋವಾ ಸಿಎಂ ಪ್ರಮೋದ್ ಸಾವಂತ್ ಮಹದಾಯಿಗಾಗಿ ಹೋರಾಟ ಮುಂದುವರೆಸುವುದಾಗಿ ಹೇಳಿಕೆ ನೀಡಿದ್ದಾರೆ. ಮಹದಾಯಿ ಐತೀರ್ಪು ಪ್ರಶ್ನಿಸಿ ಗೋವಾ ಸರ್ಕಾರ ಸಲ್ಲಿಸಿರುವ ಅರ್ಜಿ ವಿಚಾರಣೆ ಹಂತದಲ್ಲಿದ್ದಾಗ ನೀರು ತಿರುಗಿಸಿ ಕರ್ನಾಟಕ ನ್ಯಾಯಾಂಗ ನಿಂದನೆ ಮಾಡಿದೆ ಎನ್ನುವ ಆರೋಪ ಮಾಡಿದ ಗೋವಾ ಸಿಎಂ ಪ್ರಮೋದ್ ಸಾವಂತ್ ಮತ್ತೆ ಮಹದಾಯಿ ಕಿಚ್ಚು ಹೊತ್ತಿಸಿದ್ದಾರೆ.
ಮಹದಾಯಿ ನ್ಯಾಯಾಧಿಕರಣ ಕರ್ನಾಟಕಕ್ಕೆ 13.42 ಟಿಎಂಸಿ ನೀರು ಹಂಚಿಕೆ ಮಾಡಿ ಐತೀರ್ಪು ನೀಡಿತ್ತು. ಅಲ್ಲದೇ ಇದರ ಆದಿಸೂಚನೆ ಹೊರಡಿಸಲು 2020 ರ ಫೆಬ್ರವರಿ 2 ರಂದು ಸುಪ್ರೀಂ ಆದೇಶ ಹೊರಡಿಸಿದ್ದ ಹಿನ್ನೆಲೆಯಲ್ಲಿ ಫೆ. 27 ಕ್ಕೆ ಕೇಂದ್ರ ಸರ್ಕಾರ ಗೆಜೆಟ್ ಆಧಿಸೂಚನೆ ಹೊರಡಿಸಿ ನೀರು ಬಳಕೆಗೆ ಸಮ್ಮತಿ ನೀಡಿತ್ತು. ಹೀಗಾಗಿ ಕರ್ನಾಟಕ ಮಹದಾಯಿ ನದಿ ತಿರುವು ಯೋಜನೆಗೆ ಸಿದ್ಧತೆ ಮಾಡಿಕೊಂಡಿತ್ತು. ಇದರಿಂದಾಗಿ ಮತ್ತೆ ಕ್ಯಾತೆ ತೆಗೆದು ಸುಪ್ರೀಂಕೋರ್ಟ್ ಗೆ ಗೋವಾ ಸರ್ಕಾರ ಹೋಗಿದೆ. ಇದು ರೈತರ ಆತಂಕಕ್ಕೆ ಕಾರಣವಾಗಿದೆ.
ಕೂಡಲೇ ನಮ್ಮ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡು ರಾಜ್ಯದ ರೈತರಿಗೆ ಅನ್ಯಾಯ ಆಗದಂತೆ ನೋಡಿಕೊಳ್ಳಬೇಕೆಂದು ಮಹದಾಯಿ ಹೋರಾಟಗಾರರು ಆಗ್ರಹಿಸಿದ್ದಾರೆ.