ಹುಬ್ಬಳ್ಳಿ: ಸರ್ಕಾರಿ ನೌಕರಿ ಅಂದರೆ ನೂರು ಜನ ಬರ್ತಾರೆ, ನೂರು ಜನ ಹೋಗ್ತಾರೆ. ಆದರೆ, ಬಂದು ಹೋದ ವ್ಯಕ್ತಿಗಳು ಮಾಡಿದ ಕಾರ್ಯ ಮಾತ್ರ ಅಜರಾಮರವಾಗಿ ಉಳಿಯುವುದು ಬಹಳ ವಿರಳ. ಉನ್ನತ ಹುದ್ದೆಯಲ್ಲಿದ್ದರೂ ಸಾಮಾನ್ಯರಂತೆ ಎಲ್ಲರೊಂದಿಗೆ ಬೆರೆತು, ಎಲ್ಲರೂ ಬೆರಗಾಗುವಂತೆ ಇಲ್ಲೊಬ್ಬ ಅಧಿಕಾರಿ ಮಾಡಿದ್ದಾರೆ.
ಪ್ರಸ್ತುತ ದಿನಮಾನಗಳಲ್ಲಿ ರೈಲ್ವೆ ಸೇವೆ ಸಾಕಷ್ಟು ಜನಮನ್ನಣೆ ಪಡೆದಿದೆ. ಅಲ್ಲದೆ ನೈಋತ್ಯ ರೈಲ್ವೆ ವಲಯ ಸಾಕಷ್ಟು ಜನಪರ ಕಾರ್ಯದ ಮೂಲಕ ಜನಸ್ನೇಹಿಯಾಗಿ ಜನರ ಮನಸ್ಸನ್ನು ಗೆದ್ದಿದೆ. ಈ ನೈಋತ್ಯ ರೈಲ್ವೆ ವಲಯದಲ್ಲಿ ಉನ್ನತ ಹುದ್ದೆಯಲ್ಲಿದ್ದು ಎಲ್ಲರ ಅಚ್ಚುಮೆಚ್ಚಿನ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ ನೈಋತ್ಯ ರೈಲ್ವೆ ವಲಯದ ವ್ಯವಸ್ಥಾಪಕ ನಿರ್ದೇಶಕ ಅಜಯಕುಮಾರ್ ಸಿಂಗ್ ಅವರು ಎಲ್ಲಾ ವರ್ಗದ ಸಿಬ್ಬಂದಿ ಜೊತೆ ಬೆರೆತು ನೈಋತ್ಯ ರೈಲ್ವೆಯ ಅಭಿವೃದ್ಧಿ ಕೀರ್ತಿ ಪತಾಕೆ ಹಾರಿಸಿದ್ದಾರೆ.
ಹೌದು, ಅಜಯಕುಮಾರ್ ಸಿಂಗ್ ಅವರು ಸುಮಾರು 11,000 ಕ್ಕೂ ಹೆಚ್ಚು ಸಿಬ್ಬಂದಿಯನ್ನು ನೇರವಾಗಿ ಭೇಟಿ ಮಾಡಿ, ಸಮಸ್ಯೆಗಳ ಕುರಿತು ಚರ್ಚಿಸಿದ್ದಾರೆ. ಸರಳ ಸ್ವಭಾವದ ವ್ಯಕ್ತಿಯಾದ ಇವರು ಮಾತುಗಳಿಂದ ಅಭಿವೃದ್ಧಿ ಸಾಧ್ಯವಿಲ್ಲ, ನಾವು ಮಾಡುವ ಅಭಿವೃದ್ಧಿ ಕಾರ್ಯ ಹೆಚ್ಚು ಮಾತನಾಡಬೇಕು ಎಂಬ ಸಿದ್ಧಾಂತವನ್ನು ಮೈಗೂಡಿಸಿಕೊಂಡಿದ್ದಾರೆ.
ಅಕ್ಟೋಬರ್ 2018 ರಲ್ಲಿ ನೈಋತ್ಯ ರೈಲ್ವೆ ವ್ಯವಸ್ಥಾಪಕ ನಿರ್ದೇಶಕ ಅಧಿಕಾರ ವಹಿಸಿಕೊಂಡ ಇವರು, ಸುಮಾರು ಎರಡೂವರೆ ವರ್ಷಗಳ ಕಾಲ ಗಣನೀಯ ಸೇವೆ ಸಲ್ಲಿಸಿ ಈಗ ನಿವೃತ್ತಿಯಾಗುತ್ತಿರುವುದು ಸಿಬ್ಬಂದಿಗೆ ನೋವುಂಟು ಮಾಡಿದೆ. ವಿಶ್ವದ ಅತಿದೊಡ್ಡ ರೈಲ್ವೆ ಪ್ಲಾಟ್ ಫಾರಂ, ಹುಬ್ಬಳ್ಳಿ ನಿಲ್ದಾಣಕ್ಕೆ ಸಿದ್ಧಾರೂಢರ ಹೆಸರು ನಾಮಕರಣ, ಹೊಸ ರೈಲ್ವೆ ನಿಲ್ದಾಣ ಕಟ್ಟಡಗಳ ನಿರ್ಮಾಣ, ಧಾರವಾಡ, ದಾವಣಗೆರೆ, ಬೆಳಗಾವಿ ನಿಲ್ದಾಣಗಳ ಪುನರ್ ನಿರ್ಮಾಣದಂತಹ ಹಲವಾರು ಕಾರ್ಯಗಳ ಮೂಲಕ ನೈಋತ್ಯ ರೈಲ್ವೆ ವಲಯದಲ್ಲಿ ಸಾಕಷ್ಟು ಸೇವೆಯನ್ನು ಸಲ್ಲಿಸಿದ್ದಾರೆ.
ಇನ್ನು ಈ ಕುರಿತು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿರುವ ಅಜಯಕುಮಾರ್ ಸಿಂಗ್, ಹುಬ್ಬಳ್ಳಿಯಲ್ಲಿ ಕೆಲಸ ಮಾಡಿರುವುದು ನನ್ನ ಸೌಭಾಗ್ಯ. 200 ಕ್ಕೂ ಹೆಚ್ಚು ಶ್ರಮದಾನ, 150ಕ್ಕೂ ಹೆಚ್ಚು ಗಾರ್ಡನ್ ನಿರ್ಮಾಣ, 4535 ಕೆ ಡಬ್ಲ್ಯೂಪಿ ಸೋಲಾರ್ ಪ್ಯಾನಲ್ ಅಳವಡಿಕೆ, ಡಬ್ಲಿಂಗ್ ಹಾಗೂ ಇಲೆಕ್ಟ್ರಿಕಲ್ ಟ್ರೈನ್ ರನ್ ಸೇರಿದಂತೆ ಸಾಕಷ್ಟು ಅಭಿವೃದ್ಧಿ ಕಾರ್ಯವನ್ನು ಮಾಡಿದ್ದೇನೆ. ಅಲ್ಲದೇ ಹುಬ್ಬಳ್ಳಿಯಲ್ಲಿ ಕಾರ್ಯ ನಿರ್ವಹಿಸಿರುವುದು ನಿಜಕ್ಕೂ ಸಂತೋಷ ತಂದಿದೆ ಎಂದರು.