ಗಿಣಿಗೇರಾ-ರಾಯಚೂರು ನೂತನ ರೈಲ್ವೆ ಮಾರ್ಗದ ಪ್ರಗತಿ ಪರಿಶೀಲನೆ - ಈಟಿವಿ ಭಾರತ ಕನ್ನಡ
ನೈರುತ್ಯ ರೈಲ್ವೆ ಜನರಲ್ ಮ್ಯಾನೇಜರ್ ಸಂಜೀವ್ ಕಿಶೋರ್ ಅವರು ಗಿಣಿಗೇರಾ - ರಾಯಚೂರು ನೂತನ ರೈಲ್ವೆ ಮಾರ್ಗದ ಪ್ರಗತಿ ಪರಿಶೀಲನೆ ನಡೆಸಿದರು.
ಹುಬ್ಬಳ್ಳಿ: ಗಿಣಿಗೇರಾ-ರಾಯಚೂರು (165 ಕಿ.ಮೀ) ಹೊಸ ರೈಲ್ವೇ ಮಾರ್ಗ ಯೋಜನೆಯ ಕಾಮಗಾರಿಯನ್ನು ಪ್ರಧಾನ ವ್ಯವಸ್ಥಾಪಕ ಸಂಜೀವ್ ಕಿಶೋರ್ ಪರಿಶೀಲಿಸಿದರು. ಉದ್ದೇಶಿತ ಕಾಮಗಾರಿಯನ್ನು ಸಕಾಲದಲ್ಲಿ ಪೂರ್ಣಗೊಳಿಸುವಂತೆ ಮುಖ್ಯ ಅಭಿಯಂತರ ಮಹೇಶ ದೇಕಾಟೆ ಅವರಿಗೆ ಸೂಚಿಸಿದರು.
ಈ ರೈಲ್ವೆ ಮಾರ್ಗದ ಭಾಗವಾದ ಕಾರಟಗಿ-ಸಿಂಧನೂರು (18 ಕಿ.ಮೀ)ನೂತನ ರೈಲ್ವೆ ಮಾರ್ಗವನ್ನು ಮಾರ್ಚ್ 2023ರೊಳಗೆ ಕಾರ್ಯಾರಂಭಿಸುವ ಗುರಿ ಹೊಂದಲಾಗಿದೆ. ಈ ಭಾಗದಲ್ಲಿ ನಡೆಯುತ್ತಿರುವ ಕಾಮಗಾರಿಯ ಪ್ರಗತಿ ಪರಿಶೀಲನೆ ಮತ್ತು ಕಾರಟಗಿಯಲ್ಲಿ ಗೂಡ್ಸ್ ಶೆಡ್ ನಿರ್ಮಾಣದ ಪ್ರಗತಿಯನ್ನು ಇದೇ ವೇಳೆ ಪರಿಶೀಲಿಸಲಾಗಿದೆ. ಜೊತೆಗೆ, ಯೋಜನೆಯ ಗುತ್ತಿಗೆದಾರರೊಂದಿಗೆ ಸಂವಾದ ನಡೆಸಿ ನಿರ್ಮಿಸಲಾಗುತ್ತಿರುವ ಮೂಲಸೌಕರ್ಯದಲ್ಲಿ ಉನ್ನತ ಮತ್ತು ಸಮರ್ಪಕ ಗುಣಮಟ್ಟವನ್ನು ಕಾಪಾಡಿಕೊಳ್ಳಲು ತಿಳಿಸಿದರು.
ಈ ಹೊಸ ಮಾರ್ಗದ ಯೋಜನೆಯನ್ನು 2,600 ಕೋಟಿ ರೂ ಅಂದಾಜು ವೆಚ್ಚದಲ್ಲಿ 2007- 2008ರಲ್ಲಿ ಕರ್ನಾಟಕ ಸರ್ಕಾರ (50:50) ಸಹಭಾಗಿತ್ವದಲ್ಲಿ ಮಂಜೂರು ಮಾಡಲಾಗಿದೆ. ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ರೈಲ್ವೆ ಸಂಪರ್ಕ ಕಲ್ಪಿಸುತ್ತದೆ ಮತ್ತು ಕೊಪ್ಪಳ/ಹೊಸಪೇಟೆ ಮತ್ತು ಹೈದರಾಬಾದ್ ನಡುವಿನ ಅಂತರ ಕಡಿಮೆ ಮಾಡುತ್ತದೆ. ಗಂಗಾವತಿ ಪ್ರದೇಶವನ್ನು ಕರ್ನಾಟಕದ ಭತ್ತದ ಕಣಜ ಎಂದು ಕರೆಯಲಾಗುತ್ತದೆ. ಈ ರೈಲ್ವೇ ಲೈನ್ ಸಂಪರ್ಕವು ಈ ಪ್ರದೇಶದ ರೈತರು ಮತ್ತು ಕೃಷಿ ಉತ್ಪಾದಕರಿಗೆ ಅಕ್ಕಿ ಸಾಗಣೆಗೆ ಹೆಚ್ಚಿನ ಪ್ರಯೋಜನ ನೀಡುತ್ತದೆ.
ಇಲ್ಲಿಯವರೆಗೆ ಒಟ್ಟು 66 ಕಿ.ಮೀ. ರೈಲ್ವೆ ಲೈನ್ ಕಾರ್ಯಾರಂಭ ಮಾಡಿದ್ದು, ಇದು 2017ರಲ್ಲಿ ಕಾರ್ಯಾರಂಭ ಮಾಡಿದ ಗಿಣಿಗೇರಾ-ಚಿಕ್ಕಬೆಣಕಲ್ (27ಕಿಮೀ), 2019ರಲ್ಲಿ ಕಾರ್ಯಾರಂಭ ಮಾಡಿದ ಚಿಕ್ಕಬೆಣಕಲ್-ಗಂಗಾವತಿ (13ಕಿಮೀ), 2020ರಲ್ಲಿ ಗಂಗಾವತಿ-ಕಾರಟಗಿ (26ಕಿಮೀ) ಒಳಗೊಂಡಿದೆ. ಹುಬ್ಬಳ್ಳಿಯ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಹರ್ಷ ಖರೆ ಮತ್ತು ಮುಖ್ಯ ಇಂಜಿನಿಯರ್ ಮಹೇಶ ದೇಕಾಟೆ ಉಪಸ್ಥಿತರಿದ್ದರು.
ಇದನ್ನೂ ಓದಿ: ಇನ್ನೂ ಪ್ರಾರಂಭವಾಗದ ಬಳ್ಳಾರಿ-ಸಿಂಧನೂರು ರೈಲ್ವೆ ಕಾಮಗಾರಿ.. ಕೇಂದ್ರದ ವಿರುದ್ಧ ಜನರ ಆಕ್ರೋಶ!