ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಮಹನಾಗರ ಪಾಲಿಕೆ ಸರಿಯಾಗಿ ವೇತನ ನೀಡುತ್ತಿಲ್ಲ ಎಂದು ಆರೋಪಿಸಿ ಕಸ ಸಂಗ್ರಹ ಮಾಡುವ ಪಾಲಿಕೆಯ ಟಿಪ್ಪರ್ ಚಾಲಕ ಆತ್ಮಹತ್ಯೆಗೆ ಯತ್ನಿಸಿರುವ ವಿಡಿಯೋ ವೈರಲ್ ಆಗಿದೆ. ಚಾಲಕ ಈ ವಿಡಿಯೋವನ್ನ ಪ್ರಧಾನಿ ನರೇಂದ್ರ ಮೋದಿಗೆ ಟ್ವಿಟರ್ ಮೂಲಕ ತ್ಯಾಗ ಮಾಡಿ ರಕ್ಷಣೆ ಮಾಡುವಂತೆ ಮನವಿ ಮಾಡಿದ್ದಾನೆ.
ಮಲ್ಲಿಕಾರ್ಜುನ ಬಿಜವಾಡ ಎಂಬಾತನೇ ನೇಣುಬಿಗಿದುಕೊಂಡು ಆತ್ನಹತ್ಯೆಗೆ ಯತ್ನಿಸಿದ ಕಾರ್ಮಿಕನಾಗಿದ್ದಾನೆ. ಈ ವಿಡಿಯೋವನ್ನು ಪ್ರಧಾನಿ ನರೇಂದ್ರ ಮೋದಿ, ಮಾಜಿ ಸಿಎಂ ಸಿದ್ದರಾಮಯ್ಯನವರಿಗೆ ಟ್ವಿಟ್ಟರ್ ಮೂಲಕ ಟ್ಯಾಗ್ ಮಾಡಿದ್ದು, ತಮ್ಮನ್ನು ರಕ್ಷಿಸುವಂತೆ ಮನವಿ ಮಾಡಿದ್ದಾನೆ. ಜೂನ್ 15 ರಂದು ಆತ್ಮಹತ್ಯೆಗೆ ಯತ್ನಿಸಿರುವ ವಿಡಿಯೋ ತುಣುಕು ಇದಾಗಿದ್ದು, ಮೋದಿ, ಸಿದ್ದರಾಮಯ್ಯ, ಯೋಗಿ ಆದಿತ್ಯನಾಥ್ ಸೇರಿದಂತೆ ಹಲವರಿಗೆ ಕಳುಹಿಸಿದ್ದಾನೆ. ಆದ್ರೆ ಈವರೆಗೂ ಯಾರಿಂದಲೂ ಉತ್ತರ ಬಂದಿಲ್ಲ. ಆದ್ರೆ ಇದೀಗ ಈ ವಿಡಿಯೋ ವೈರಲ್ ಆಗಿದೆ.


ಪಾಲಿಕೆಯಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿರುವ ಟಿಪ್ಪರ್ ಚಾಲಕರು ವೇತನ ಇಲ್ಲದೆ ಪರದಾಡುತ್ತಿದ್ದು, ಕುಟುಂಬ ನಿರ್ವಹಣೆ ಮಾಡಲು ಸಾಧ್ಯವಾಗದೆ ಹೆಣಗಾಡುತ್ತಿದ್ದಾರೆ. ಜುಲೈ 1ರಿಂದ ಮನೆ ಮನೆಗೆ ತೆರಳಿ ಟಿಪ್ಪರ್ ಮೂಲಕ ಕಸ ಸಂಗ್ರಹ ಮಾಡುವುದನ್ನ ನಿಲ್ಲಿಸಿದ್ದಾರೆ. ಪ್ರತಿನಿತ್ಯ ಅವಳಿ ನಗರದಲ್ಲಿ ಮನೆ ಮನೆಗಳಿಗೆ ತೆರಳಿ ಕಸ ಸಂಗ್ರಹ ಮಾಡುತ್ತಿರುವ 170ಕ್ಕೂ ಹೆಚ್ಚು ಚಾಲಕರಿಗೆ ಪಾಲಿಕೆ ವೇತನ ನೀಡಿಲ್ಲ. ಕಳೆದ 6 ರಿಂದ 7 ತಿಂಗಳ ವೇತನ ನೀಡದೆ ಚಾಲಕರನ್ನ ಆರ್ಥಿಕ ಸಂಕಷ್ಟಕ್ಕೆ ನೂಕಿರುವ ಪಾಲಿಕೆ ವಿರುದ್ಧ ಚಾಲಕರು ಬೀದಿಗಿಳಿಯಲು ಸಜ್ಜಾಗಿದ್ದಾರೆ.