ಹುಬ್ಬಳ್ಳಿ: ಇಂಧನ ಬೆಲೆ ಏರಿಕೆಯ ಬಿಸಿ ಕೇವಲ ಸಾರ್ವಜನಿಕರಿಗೆ ಮಾತ್ರವಲ್ಲದೆ, ಸಾರಿಗೆ ಸಂಸ್ಥೆಗಳಿಗೂ ತಟ್ಟಿದೆ. ದೊಡ್ಡ ಪ್ರಮಾಣದಲ್ಲಿ ಡೀಸೆಲ್ ಬಳಕೆ ಮಾಡುವ ಸಂಸ್ಥೆಗಳು ಸ್ವಂತ ಪೆಟ್ರೋಲ್ ಬಂಕ್‌ಗಳಿಂದ ಹೊರಬಂದು ಸಾರ್ವಜನಿಕರು ಉಪಯೋಗಿಸುವ ಖಾಸಗಿ ಬಂಕ್ ಗಳ ಮೊರೆ ಹೋಗುವ ಸ್ಥಿತಿ ಬಂದಿದೆ. ಹೌದು, ಸಾರಿಗೆ ಸಂಸ್ಥೆಗಳ ಪುನಶ್ಚೇತನಕ್ಕೆ ಸರ್ಕಾರ ಕಸರತ್ತು ನಡೆಸಿರುವಾಗಲೇ ಸಗಟು ಗ್ರಾಹಕರಾಗಿರುವ ಸಾರಿಗೆ ಸಂಸ್ಥೆಗಳಿಗೆ ಡೀಸೆಲ್ ದರ ಹೆಚ್ಚಳ ದೊಡ್ಡ ಹೊಡೆತ ನೀಡಿದೆ.
ಸಗಟು ಗ್ರಾಹಕರಿಗೆ ಪ್ರತಿ ಲೀಟರ್‌ಗೆ 21 ರೂ. ಹೆಚ್ಚಳವಾಗಿದ್ದು, ಡಿಸ್ಕೌಂಟ್ ಕಳೆದರೂ ಪ್ರತಿ ಲೀಟರ್‌ಗೆ 21ರೂ. ಹೊರೆ ಬೀಳುತ್ತಿದೆ. ಈ ಸಂಕಷ್ಟದಿಂದ ಪಾರಾಗಲು ಹೊರಗಿನ ಬಂಕ್‌ಗಳಿಂದ ಡೀಸೆಲ್‌ಗಾಗಿ ಮೊರೆ ಹೋಗುವ ಸ್ಥಿತಿ ಸಂಸ್ಥೆಗೆ ಬಂದಿದೆ. ಹುಬ್ಬಳ್ಳಿಯ ವಾಯುವ್ಯ ಸಾರಿಗೆ ಘಟಕದ ಬಸ್ಗಳಿಗೆ ಖಾಸಗಿ ಬಂಕ್ಗಳಲ್ಲಿ ಇಂಧನ ತುಂಬಿಸಿಕೊಳ್ಳಲಾಗ್ತಿದೆ. ಸಾರಿಗೆ ಸಂಸ್ಥೆಗಳು ನೌಕರರ ವೇತನದಷ್ಟೇ ಹಣವನ್ನು ಡೀಸೆಲ್‌ಗಾಗಿ ಪ್ರತಿ ತಿಂಗಳು ವ್ಯಯಿಸುತ್ತಿವೆ.
ನಿತ್ಯವೂ ತೈಲ ಹೆಚ್ಚಳದಿಂದಾಗಿ ಸಂಸ್ಥೆಗಳ ನಷ್ಟದ ಪ್ರಮಾಣ ಸಹ ಹೆಚ್ಚುತ್ತಿದೆಯಂತೆ. ನಿತ್ಯ 12 ಲಕ್ಷ ಲೀಟರ್‌ಗೂ ಹೆಚ್ಚು ಡೀಸೆಲ್ ಬಳಸುತ್ತಿದ್ದು, ಈ ಹಂತದಲ್ಲಿ ಪ್ರತಿ ಲೀಟರ್‌ಗೆ 21 ರೂ. ಹೊರೆ ಮತ್ತಷ್ಟು ನಷ್ಟಕ್ಕೆ ಕಾರಣವಾಗುತ್ತಿದೆ. ಹೀಗಾಗಿ, ಹೊರಗಿನ ಬಂಕ್ಗಳಲ್ಲಿ ಪ್ರತಿ ಲೀಟರ್‌ಗೆ 21 ರೂ. ಉಳಿತಾಯವಾಗುತ್ತಿರುವುದರಿಂದ ಖಾಸಗಿ ಬಂಕ್ಗಳಲ್ಲಿ ಡೀಸೆಲ್ ಹಾಕಿಸುವ ನಿರ್ಧಾರಕ್ಕೆ ಸಾರಿಗೆ ಸಂಸ್ಥೆಗಳು ಬಂದಿವೆ. ಇಂಧನದ ಬೆಲೆ ಏರಿಕೆಯಿಂದ ಸಾರ್ವಜನಿಕರು ಮಾತ್ರವಲ್ಲದೆ, ಸಾರಿಗೆ ಸಂಸ್ಥೆಗಳೇ ತತ್ತರಿಸಿ ಹೋಗುತ್ತಿದ್ದು, ಇಷ್ಟು ದಿನ ಡಿಪೋಗಳಲ್ಲಿ ಇಂಧನ ಹಾಕಿಸುತ್ತಿದ್ದ ಬಸ್ಗಳು ಈಗ ಬೀದಿಗೆ ಬಂದು ಸರದಿ ಸಾಲಿನಲ್ಲಿ ನಿಂತುಕೊಂಡು ಇಂಧನ ಹಾಕಿಸಿಕೊಳ್ಳುವಂತಾಗಿದೆ.
ಬಂಕ್ ಮಾಲೀಕರು ಇದು ಸಹಜ ಪ್ರಕ್ರಿಯೆ, ಕಡಿಮೆ ಬೆಲೆಯಲ್ಲಿ ಡೀಸೆಲ್ ಸಿಗುವುದರಿಂದ ಹಾಕಿಸಿಕೊಂಡರೆ ತಪ್ಪೇನು?. ಇದರಿಂದ ಸಾರ್ವಜನಿಕರಿಗೆ ಟಿಕೆಟ್ ಬೆಲೆ ಏರಿಕೆ ಬಿಸಿ ಇರುವುದಿಲ್ಲ ಎನ್ನುತ್ತಾರೆ.
ಓದಿ: ಎಸ್ಎಸ್ಎಲ್ಸಿ ಪರೀಕ್ಷೆ : ಬೆಂ. ಗ್ರಾ. ಜಿಲ್ಲೆಯಲ್ಲಿ ಮೊದಲ ದಿನವೇ 132 ವಿದ್ಯಾರ್ಥಿಗಳು ಗೈರು