ಧಾರವಾಡ: ಕಳೆದ ಒಂದು ವರ್ಷದ ಹಿಂದೆ ಕರ್ತವ್ಯ ಲೋಪ ಎಸಗಿ ಮಹಿಳೆಯೊಬ್ಬರ ಸಾವಿಗೆ ಕಾರಣರಾಗಿದ್ದ ನಾಲ್ವರು ಜಿಲ್ಲಾಸ್ಪತ್ರೆ ಸಿಬ್ಬಂದಿಯನ್ನ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯುಕ್ತರು ಇಂದು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.
ಜಿಲ್ಲಾಸ್ಪತ್ರೆಯ ಡಾ. ಆಶ್ರಪುಲ್ಲಾ ಎಮ್.ಆರ್ (ಹಿರಿಯ ತಜ್ಞ), ಡಾ. ಸುನಂದಾ ಮಾಡಬಾಳ, ವಿದ್ಯಾವತಿ.ಎನ್ (ಶುಶ್ರೂಶಕಿ), ಈರಣ್ಣ ಬೆಳಗಾವಿ (ಡಿ ಗ್ರೂಪ್ ನೌಕರ) ಇವರನ್ನು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯುಕ್ತ ಪಂಕಜ್ ಕುಮಾರ್ ಪಾಂಡೆ ಅಮಾನತುಗೊಂಡ ಸಿಬ್ಬಂದಿ.
2018ರಲ್ಲಿ ಈ ನಾಲ್ವರ ಕರ್ತವ್ಯದಲ್ಲಿನ ನಿರ್ಲಕ್ಷ್ಯತೆಯಿಂದಾಗಿ ಮಹಿಳಾ ರೋಗಿಯೊಬ್ಬರು ಮೃತಪಟಿಟದ್ದರು. ತನ್ನ ಪತ್ನಿಯ ಸಾವಿಗೆ ನ್ಯಾಯ ದೊರಕಿಸುವಂತೆ ಆಗ್ರಹಿಸಿ ಮೃತಳ ಪತಿ ಪ್ರಶಾಂತ ಪವಾರ ಎಂಬುವರು ನಿರಂತರ ಒಂದು ವರ್ಷದಿಂದ ಹೋರಾಟ ನಡೆಸಿದ್ದರು. ಕರ್ತವ್ಯ ಲೋಪ ಎಸಗಿದ ಸಿಬ್ಬಂದಿ ಅಮಾನತು ಮಾಡುವಂತೆ ಅಗಸ್ಟ್ 12,2018ರಲ್ಲಿ ಆಟೋ ಚಾಲಕರು ಮತ್ತು ಮಾಲೀಕರ ಸಂಘದ ನೇತೃತ್ವದಲ್ಲಿ ಪ್ರತಿಭಟನೆ ಕೂಡ ನಡೆಸಲಾಗಿತ್ತು.
ಪತಿಯ ನಿರಂತರ ಹೋರಾಟ ಮಾಡಿದ ಪರಿಣಾಮ ಮತ್ತು ಜಿಲ್ಲಾಸ್ಪತ್ರೆ ಸಿಬ್ಬಂದಿಯ ಕರ್ತವ್ಯಲೋಪ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ನಾಲ್ವರು ಸಿಬ್ಬಂದಿಯನ್ನ ಅಮನತಾ ಮಾಡಿ ಆದೇಶ ಹೊರಡಿಸಲಾಗಿದೆ.