ಧಾರವಾಡ: "ಪಂಡಿತ್ ಪುಟ್ಟರಾಜ ಗವಾಯಿಗಳ ಬಗ್ಗೆ ನನಗೆ ಪ್ರಹ್ಲಾದ್ ಜೋಶಿ ಹೇಳಿದ್ದರು. ಅವರ ಹೆಸರಿನಲ್ಲಿ ಒಂದು ಸಂಗೀತ ಕಾರ್ಯಕ್ರಮ ಮಾಡಬೇಕು. ಅದಕ್ಕೆ ನಾವು ಅನುದಾನ ಕೊಡುತ್ತೇವೆ" ಎಂದು ಕೇಂದ್ರ ಸಂಸ್ಕೃತಿ ಸಚಿವ ಅರ್ಜುನ್ ರಾಮ್ ಮೇಘವಾಲ್ ಹೇಳಿದರು. ಧಾರವಾಡ ಲಲಿತ ಕಲಾ ಅಕಾಡಮಿ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
"ನಾನು ಮಾರ್ವಡದವನು. ಈಗ ಧಾರವಾಡಕ್ಕೆ ಬಂದಿದ್ದೇನೆ. ಸಂಗೀತ ಅಕಾಡೆಮಿ ಇಲ್ಲಿ ಆಗಬೇಕು ಎಂದು ಕೆಲವರು ಮನವಿ ಸಲ್ಲಿಸಿದ್ದಾರೆ. ಎಲ್ಲಾ ಅಕಾಡೆಮಿಗಳು ಧಾರವಾಡಕ್ಕೆ ಬಂದರೆ ಜಿಲ್ಲೆ ಸಾಂಸ್ಕೃತಿಕ ರಾಜಧಾನಿಯಾಗಲಿದೆ. ಅಲ್ಲದೇ ಕಲಾವಿದರಿಗೆ ಸ್ಕಾಲರ್‌ಶಿಪ್ ಕೊಡುವ ಕೆಲಸ ಆಗಬೇಕು. ಸಂಗೀತ ನಾಟಕ ಅಕಾಡಮಿಯಿಂದ ಇದನ್ನು ಕೊಡಬಹುದು. ಮೋದಿ ಅವರಿಗೆ ಈ ಕುರಿತಾಗಿ ಮನವಿ ಮಾಡುತ್ತೇನೆ" ಎಂದು ಸಚಿವರು ಹೇಳಿದರು.
ಭಾಷಣದ ನಡುವೆ ಸ್ವಾಮಿ ವಿವೇಕಾನಂದರ ಭಾವಚಿತ್ರದೆದುರು ನೈನಾಬಾಯಿ ಹಾಡು ಹಾಡಿದ ಮೇಘವಾಲ್, "ವಿವೇಕಾನಂದರು ಈ ಹಾಡಿನ ಬಗ್ಗೆ ಪುಸ್ತಕವೊಂದರಲ್ಲಿ ಬರೆದಿರುವುದನ್ನು ಸ್ಮರಿಸಿದರು. ಸಂಗೀತದಿಂದ ಶಿಕ್ಷಣ ಸಿಗುತ್ತದೆ. ಮ್ಯೂಸಿಯಂ ಮಾಡಲು 5 ಕೋಟಿ ರೂ ಅನುದಾನ ಕೊಡುತ್ತೇವೆ" ಎಂದು ಭರವಸೆ ನೀಡಿದರು.
ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮಾತನಾಡಿ, "ಸಮಾಜದಲ್ಲಿ ಒಳ್ಳೆಯ ಸಂಗತಿಗಳು ಬಿಂಬಿತ ಆಗಬೇಕೆಂದರೆ ಈ ರೀತಿಯ ಅಕಾಡೆಮಿಗಳು ಅವಶ್ಯಕ. ಈ ಹಿಂದೆ ರಾಜರ ಆಸ್ಥಾನದಲ್ಲಿ ಸಂಗೀತಕಾರರು, ನೃತ್ಯ ಮಾಡುವವರಿಗೆ, ಕಲೆಗಾರರಿಗೆ ಆಶ್ರಯ ನೀಡುತ್ತಿದ್ದರು. ದೇಶದ ಅಸ್ಮಿತೆ ಇರುವುದು ಕಲೆಗಳಲ್ಲಿ. ನಮ್ಮ ದೇಶಕ್ಕೆ ವಿದೇಶಿ ಪ್ರವಾಸಿಗರು ಬಂದಾಗ ಮೊದಲು ತಾಜ್ ಮಹಲ್ ನೋಡಲು ಕರೆದುಕೊಂಡು ಹೋಗುತ್ತಿದ್ದರು. ಆದರೆ ಇವತ್ತು ವೃಂದಾವನಕ್ಕೆ ಕರೆದುಕೊಂಡು ಹೋಗುತ್ತಾರೆ. ನಮ್ಮ ದೇಶದಲ್ಲಿರುವ ಅನೇಕ ಬಹುದೊಡ್ಡ ಸಂಗತಿಗಳನ್ನೇ ನಾವು ಮರೆತ್ತಿದ್ದೇವೆ. ನಮ್ಮ ಪೂರ್ವಜರ ಮತ್ತು ಇತಿಹಾಸದ ಬಗ್ಗೆ ಒಳ್ಳೆಯ ಭಾವನೆ ಮೂಡಿಸಿದಾಗ ಉತ್ತಮ ಭವಿಷ್ಯವನ್ನು ನಿರ್ಮಾಣ ಮಾಡಬಹುದು. ಆ ಉತ್ತಮವಾದ ಭವಿಷ್ಯ ಇಂದು ನಿರ್ಮಾಣವಾಗುತ್ತಿದೆ" ಎಂದು ಹೇಳಿದರು.
ಇದನ್ನೂ ಓದಿ: ಕೇಸರಿ ಕಂಡರೆ ಹಿಂದೆ ಸರಿಯುತ್ತಿದ್ದವರಿಗೆ ಹಿಂದುತ್ವದ ಮಹತ್ವ ಅರಿವಾಗುತ್ತಿದೆ: ಸಿ.ಟಿ.ರವಿ