ಹುಬ್ಬಳ್ಳಿ: ರಮೇಶ್ ಜಾರಕಿಹೊಳಿ ರಾಸಲೀಲೆ ಸಿಡಿ ಬಿಜೆಪಿ ಪಕ್ಷದ ಆಂತರಿಕ ವಿಚಾರ. ಶಿಸ್ತಿನ ಪಕ್ಷ ಎಂದು ಹೇಳಿಕೊಳ್ಳುವ ಸರ್ಕಾರ ಈ ಬಗ್ಗೆ ನೋಡಿಕೊಳ್ಳುತ್ತದೆ ಎಂದು ಮಾಜಿ ಶಾಸಕ ಕೋನರಡ್ಡಿ ಹೇಳಿದರು.
ಅನೇಕ ರಾಜಕೀಯ ಮುಖಂಡರ ರಾಸಲೀಲೆ ವಿಡಿಯೋ ಇದೆ ಎಂದು ಶಾಸಕ ಬಸವನಗೌಡ ಯತ್ನಾಳ್ ಹೇಳಿದ್ದಾರೆ. ನಾನು ರಮೇಶ್ ಜಾರಕಿಹೊಳಿ ರಾಸಲೀಲೆ ವಿಷಯದ ಬಗ್ಗೆ ಮಾತನಾಡುವುದಿಲ್ಲ ಎಂದು ಅವರು ಹೇಳಿದರು.
ನಗರದಲ್ಲಿ ಮಾತನಾಡಿದ ಅವರು, ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಜನಾಂದೋಲನ ಹೋರಾಟವನ್ನು ಜೆಡಿಎಸ್ ವತಿಯಿಂದ ಹಮ್ಮಿಕೊಳ್ಳಲಾಗಿದೆ. ಕೃಷ್ಣಾ ಕಣಿವೆಯ ಅಚ್ಚುಕಟ್ಟು ಪ್ರದೇಶದ ಅಧೀನದಲ್ಲಿ ಬರುವ ಮಹಾದಾಯಿ, ಕಳಸಾ ಬಂಡೂರಿ, ಮಲಪ್ರಭಾ ಹಾಗೂ ಘಟಪ್ರಭಾ ಒಳಗೊಂಡಂತೆ ಆಲಮಟ್ಟಿ ಡ್ಯಾಂ ನೀರು ಆಂಧ್ರ ಹಾಗೂ ತೆಲಂಗಾಣ ರಾಜ್ಯಗಳಿಗೆ ಉಪಯೋಗವಾಗುತ್ತದೆ. ಕರ್ನಾಟಕ ತನ್ನ ನೀರನ್ನು ಉಪಯೋಗಿಸಲು ಭೂಸ್ವಾಧೀನ ಮಾಡಿ ಲಕ್ಷಾಂತರ ಹೆಕ್ಟೇರ್ ಪ್ರದೇಶಗಳಿಗೆ ನೀರು ಹರಿಸಲು ರಾಜ್ಯ ಸರ್ಕಾರದಿಂದ ಇಲ್ಲಿಯವರೆಗೆ ಸಾಧ್ಯವಾಗಿಲ್ಲ.
ಈ ಹಿಂದೆ ಹೆಚ್.ಡಿ. ದೇವೇಗೌಡರು ಪ್ರಧಾನಮಂತ್ರಿ ಆಗಿದ್ದಾಗ ಕೇಂದ್ರ ಸರ್ಕಾರ ಹೊಸ ಎಐಬಿಪಿ ಯೋಜನೆ ಜಾರಿ ಮಾಡಿ ಅಂದಾಜು 18 ಸಾವಿರ ಕೋಟಿ ರೂ ಅನುದಾನ ರಾಜ್ಯಕ್ಕೆ ಕೊಟ್ಟು ನೀರಾವರಿ ಹಾಗೂ ಆಲಮಟ್ಟಿ ಜಲಾಶಯದ ಎತ್ತರ ಹೆಚ್ಚಿಸಿದ್ದಾರೆ. ಎಐಬಿಪಿ ಯೋಜನೆಯನ್ನು ಈಗಿನ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಸ್ಥಗಿತಗೊಳಿಸಿದ್ದಾರೆ. ಇದನ್ನು ಖಂಡಿಸಿ ಮುಂದಿನ ದಿನಗಳಲ್ಲಿ ಟ್ರಾಕ್ಟರ್ ರ್ಯಾಲಿ ಮೂಲಕ ಬೆಂಗಳೂರು ರಾಜಭವನ ಚಲೋ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.