ಹುಬ್ಬಳ್ಳಿ : ಕಳೆದ ಸಾರ್ವತ್ರಿಕ ಚುನಾವಣೆಯಲ್ಲಿ ಸೋತಿದ್ದ ಮಾಜಿ ಸಚಿವ ಸಂತೋಷ ಲಾಡ್ ಕಲಘಟಗಿ ಕ್ಷೇತ್ರದಲ್ಲಿ ಏಕಾಏಕಿ ಪ್ರತ್ಯಕ್ಷವಾಗಿದ್ದಾರೆ. ಇದು ಧಾರವಾಡ ಜಿಲ್ಲೆಯಲ್ಲಿ ರಾಜಕೀಯ ಗರಿಗೆದರುವಂತೆ ಮಾಡಿದೆ.
ಕಲಘಟಗಿ ವಿಧಾನಸಭೆ ಚುನಾವಣೆಯಲ್ಲಿ ಕಳೆದ ಬಾರಿ ಸೋತ ಬಳಿಕ ಕ್ಷೇತ್ರದಿಂದ ದೂರವಾಗಿದ್ದರು. ಬಿಜೆಪಿಯ ಸಿಎಂ ನಿಂಬಣ್ಣವರ ವಿರುದ್ಧ 29 ಸಾವಿರ ಮತಗಳ ಅಂತರದಿಂದ ಹೀನಾಯ ಸೋಲು ಕಂಡಿದ್ದರು. ಪರಾಭವಗೊಂಡ ನಂತರ ಒಮ್ಮೆಯೂ ಕ್ಷೇತದತ್ತ ಮುಖ ಮಾಡಿರಲಿಲ್ಲ. ಆದರೆ, ಕಲಘಟಗಿ ಕ್ಷೇತ್ರದಲ್ಲಿ ಇಂದು ದಿಢೀರನೆ ಲಾಡ್ ಪ್ರತ್ಯಕ್ಷವಾಗಿ ಕುತೂಹಲ ಮೂಡಿಸಿದ್ದಾರೆ.
ಈಗಾಗಲೇ ಕ್ಷೇತ್ರದಲ್ಲಿ ಕಾಂಗ್ರೆಸ್ನ ಮಾಜಿ ವಿಧಾನ ಪರಿಷತ್ ಸದಸ್ಯ ನಾಗರಾಜ್ ಛಬ್ಬಿ ಸಂಚಾರ ನಡೆಸುತ್ತಿದ್ದಾರೆ. ಇದರಿಂದಾಗಿ ಮತ್ತೆ ಕ್ಷೇತ್ರದ ಟಿಕೇಟ್ ಕೈತಪ್ಪುತ್ತೆಂಬ ಭಯ ಮಾಜಿ ಸಚಿವರಲ್ಲಿ ಮನೆ ಮಾಡಿರಲೂ ಸಾಕು. ಹೀಗಾಗಿ, ಮತ್ತೆ ರಾಜಕೀಯ ನೆಲೆ ಗಟ್ಟಿಗೊಳಿಸಿಕೊಳ್ಳಲು ಕ್ಷೇತ್ರದತ್ತ ಮುಖ ಮಾಡಿದ್ದಾರೆ ಎನ್ನಲಾಗಿದೆ.
ಆದರೆ, ಕ್ಷೇತ್ರದಲ್ಲಿ ವಾಸವಾಗಿರುವ ಸ್ಥಳೀಯ ನಾಯಕರಿಗೆ ಟಿಕೇಟ್ ನೀಡಬೇಕು ಎಂಬ ಕೂಗು ಕಾಂಗ್ರೆಸ್ ವಲಯದಲ್ಲಿ ಕೇಳಿ ಬರುತ್ತಿದೆ. ಸ್ಥಳೀಯರಿಗೆ ಕಾಂಗ್ರೆಸ್ ಟಿಕೇಟ್ ನೀಡಬೇಕೆಂದು ಹೈಕಮಾಂಡ್‌ಗೆ ಈಗಿನಿಂದಲೇ ನಾಯಕರು ದುಂಬಾಲು ಬಿದ್ದಿದ್ದಾರೆ. ಹೀಗಾಗಿ, ಮುಂದಿನ ಚುನಾವಣೆಗೆ ಕಲಘಟಗಿ ಕ್ಷೇತ್ರದಲ್ಲಿ ಟಿಕೇಟ್ ಕೈ ತಪ್ಪಿದ್ರೆ ರಾಜಕೀಯವಾಗಿ ನೆಲೆ ಕಂಡುಕೊಳ್ಳಲು ಕಷ್ಟ ಅನ್ನೋದನ್ನ ಅರಿತ ಲಾಡ್ ಕ್ಷೇತ್ರದಲ್ಲಿ ರೌಂಡ್ ಹಾಕುವ ಮೂಲಕ ರಾಜಕೀಯ ಕುತೂಹಲ ಮೂಡಿಸಿದ್ದಾರೆ.