ಹುಬ್ಬಳ್ಳಿ: ಬಿಟ್ ಕಾಯಿನ್‌ನಲ್ಲಿ ಮುಖ್ಯಮಂತ್ರಿಗಳು ಭಾಗಿಯಾಗಿದ್ದಾರೆಂದು ಪ್ರಿಯಾಂಕ ಖರ್ಗೆ ಹೇಳಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿಗಳು ಸ್ಪಷ್ಟಪಡಿಸಲಿ. ಪ್ರಿಯಾಂಕ ಖರ್ಗೆ ಹೇಳಿದ್ದಕ್ಕೆ ನಾನು ಸಹಮತ ವ್ಯಕ್ತಪಡಿಸುತ್ತೇನೆ ಎಂದು ಮಾಜಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಹೇಳಿದರು.
ನಗರದಲ್ಲಿಂದು ಕಾಂಗ್ರೆಸ್ ಕಛೇರಿಯಲ್ಲಿ ಸುದ್ಧಿಗೋಷ್ಟಿ ನಡೆಸಿ ಮಾತನಾಡಿದ ಅವರು, ದಲಿತ ಸಿಎಂ ವಿಚಾರವಾಗಿ ಸಾರ್ವಜನಿಕವಾಗಿ ಚರ್ಚೆ ಮಾಡಿಲ್ಲ, ಮಾಡುವುದಿಲ್ಲ. 113 ಕ್ಷೇತ್ರದಲ್ಲಿ ಗೆದ್ದ ನಂತರ ಆ ಬಗ್ಗೆ ಚರ್ಚೆ ಮಾಡಲಾಗುತ್ತದೆ. ನಮ್ಮ ಪಕ್ಷವನ್ನು ಅಧಿಕಾರಕ್ಕೆ ತಂದ ಮೇಲೆ ಈ ಬಗ್ಗೆ ತೀರ್ಮಾನ ತೆಗೆದು ಕೊಳ್ಳಲಾಗುತ್ತದೆ ಎಂದರು.
ದಲಿತ ಸಿಎಂ ಬಗ್ಗೆ ಹೈಕಮಾಂಡ‌್ ನಿರ್ಧಾರ ಮಾಡುತ್ತದೆ. ನಾವು ಬಹಿರಂಗವಾಗಿ ಚರ್ಚೆ ರೂಪದಲ್ಲಿ ಇದನ್ನು ತೆಗೆದುಕೊಂಡು ಹೋಗುವುದಿಲ್ಲ. ದಲಿತ ಎಂಬ ಹೆಸರಿನಲ್ಲಿ ಬಿಜೆಪಿಯವರು ರಾಜಕೀಯ ಮಾಡುತ್ತಿದ್ದಾರೆ ಎಂದಿರುವ ಅವರು, ಹೊಟ್ಟೆಪಾಡಿಗಾಗಿ ಕೆಲವರೂ ಬಿಜೆಪಿಗೆ ಹೋಗಿದ್ದಾರೆಂಬ ಸಿದ್ದರಾಮಯ್ಯ ಹೇಳಿಕೆಯನ್ನು ಬಿಜೆಪಿ ರಾಜಕೀಯವಾಗಿ ಬಳಸಿಕೊಳ್ಳುತ್ತಿದೆ. ಸಿದ್ದರಾಮಯ್ಯ ಅವರು ಈಗಾಗಲೇ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ ಎಂದು ಅವರು ಹೇಳಿದರು.
ಇವತ್ತು ಕರ್ನಾಟಕದಲ್ಲಿ ದುರಾಡಳಿ ನಡೆಯುತ್ತಿದೆ. ಯಾವುದೇ ಇಲಾಖೆಗೆ ಹೋದರು ಅಲ್ಲಿ ಭ್ರಷ್ಟಾಚಾರ ಇದೆ. ವಿಧಾನಸೌದದಲ್ಲಿ ಯಾವುದೇ ಕೆಲಸ ಆಗಬೇಕಾದರೆ ಪರ್ಸೆಂಟೇಜ್ ಕೊಟ್ಟರೆ ಮಾತ್ರ ಕೆಲಸ ಆಗುತ್ತದೆ. ಬೊಮ್ಮಾಯಿ ಸರ್ಕಾರ ಭ್ರಷ್ಟಾಚಾರದಿಂದ ತುಂಬಿದೆ. ಪೆಟ್ರೋಲ್ ಮತ್ತು ಡೀಸೆಲ್‌ನಿಂದ ಹಣದ ಲೆಕ್ಕ ಕೊಡಬೇಕು. ಇಲ್ಲಿಯವರೆಗೆ ಎಷ್ಟು ಹಣ ಸಂಗ್ರಹ ಆಗಿದೆ ಈ ಬಗ್ಗೆ ಲೆಕ್ಕ ಕೊಡಲಿ. ಸುಮ್ಮನೆ ಜನರಿಗೆ ಮೋಸ ಮಾಡಿ, ಸುಳ್ಳು ಹೇಳುವ ಕೆಲಸ ಮಾಡ್ತಾ ಇದ್ದಾರೆ ಎಂದು ಬೊಮ್ಮಾಯಿ ವಿರುದ್ಧ ಕಿಡಿಕಾರಿದರು.
ಅಗತ್ಯ ವಸ್ತುಗಳ ಬೆಲೆ ಏರಿಕೆ ಹೆಚ್ಚಾಗಿದೆ, ಇದನ್ನು ಕಡಿಮೆ ಮಾಡುವವರು ಯಾರು? ಇದನ್ನು ನಿಯಂತ್ರಣ ಮಾಡಲಿಕ್ಕೆ ನಿಮ್ಮಂದ ಸಾಧ್ಯವಾಗಿಲ್ಲ ಏಕೆ? ಎಂದು ಪ್ರಶ್ನಿಸಿದರು.