ಧಾರವಾಡ : ಲೋಕಸಭೆ ಚುನಾವಣೆ ಹಿನ್ನೆಲೆ ತಯಾರಿ ಸಭೆ ನಡೆಯಲಿದೆ. ಕಾರ್ಯಕರ್ತರನ್ನು ಸೇರಿಸಿ ಮಾರ್ಗದರ್ಶನ ಮಾಡುವ ಸಭೆ ಇದಾಗಿದ್ದು, ಜ. 10ಕ್ಕೆ ಬೆಂಗಳೂರಿನಲ್ಲಿ ಸಭೆ ಕರೆಯಲಾಗಿದೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರು ಹೇಳಿದರು.
ಲೋಕಸಭೆ ತಯಾರಿ ಕುರಿತು ಕಾಂಗ್ರೆಸ್ ಸಭೆ ಹಿನ್ನೆಲೆ ಧಾರವಾಡ ನೌಕರರ ಭವನದಲ್ಲಿ ಸಭೆಗೂ ಮುಂಚೆ ಮಾತನಾಡಿದ ಅವರು, ಪಕ್ಷದ ರಾಜ್ಯ ಅಧ್ಯಕ್ಷರು, ಸಿಎಂ ಸಭೆ ನಡೆಸಲಿದ್ದಾರೆ. ಲೋಕಸಭೆ ಚುನಾವಣೆ ಬಗ್ಗೆ ಆ ಸಭೆಯಲ್ಲಿ ಚರ್ಚೆ ಆಗಲಿದೆ. ಟಿಕೆಟ್ ಆಕಾಂಕ್ಷಿಗಳು, ಅಭ್ಯರ್ಥಿಗಳ ಬಗ್ಗೆ ಆ ಸಭೆಯಲ್ಲಿ ಚರ್ಚೆ ಆಗುತ್ತದೆ ಎಂದರು. ಪಕ್ಷಕ್ಕೆ ಹೊಸಬರ ಸೇರ್ಪಡೆ ವಿಚಾರಕ್ಕೆ ಮಾತನಾಡಿದ ಅವರು, ಪಕ್ಷಕ್ಕೆ ತತ್ವ ಸಿದ್ಧಾಂತ ಒಪ್ಪಿ ಯಾರೇ ಬಂದರು ತೆಗೆದುಕೊಳ್ಳುತ್ತೇವೆ. ಯಾರೇ ಬಂದರೂ ತೆಗೆದುಕೊಳ್ಳಲು ಸಿದ್ಧವಿದ್ದೇವೆ ಎಂದು ಹೇಳಿದರು.
ಮುನೇನಕೊಪ್ಪ ಸೇರ್ಪಡೆ ವಿಚಾರಕ್ಕೆ ಮಾತನಾಡಿ, ಮುನೇನಕೊಪ್ಪ ಜೊತೆ ಈ ವಿಷಯವಾಗಿ ನಾನು ಮಾತನಾಡಿಲ್ಲ. ನಾನಾಗಿಯೇ ಯಾರನ್ನು ಕರೆಯುತ್ತಿಲ್ಲ. ಸ್ವಯಂ ಪ್ರೇರಣೆಯಿಂದ ಅನೇಕರು ಬಂದಿದ್ದಾರೆ. ಹಾಗೆಯೇ ಅನೇಕರು ಬರುತ್ತಾರೆ. ನಾನಂತೂ ಲೋಕಸಭೆ ಚುನಾವಣೆಗೆ ಸ್ಪರ್ಧಿಸುವುದಿಲ್ಲ. ನನಗೆ ಟಿಕೆಟ್ ಕೊಡುವ ಬಗ್ಗೆ ಯಾವುದೇ ಚರ್ಚೆ ಆಗಿಲ್ಲ ಎಂದು ಸ್ಪಷ್ಟಪಡಿಸಿದರು.
ಸಚಿವ ಸಂತೋಷ್ ಲಾಡ್ ಮಾತನಾಡಿ, ಲೋಕಸಭೆ ಚುನಾವಣೆಯ ಬಗ್ಗೆ ಇವತ್ತು ಸಭೆ ಆಗುತ್ತಿದೆ. ಹುಬ್ಬಳ್ಳಿ-ಧಾರವಾಡ ಪಶ್ಚಿಮ ಕ್ಷೇತ್ರಕ್ಕೆ ಸಂಬಂಧಿಸಿದ ಸಭೆ ಇದು. ಜಿಲ್ಲಾ ಕಾಂಗ್ರೆಸ್ ನೇತೃತ್ವದಲ್ಲಿ ಈ ಸಭೆ ಆಗುತ್ತಿದೆ. ಪಕ್ಷದ ಸಂಘಟನೆ ಮತ್ತು ಚುನಾವಣೆ ಎದುರಿಸುವ ಬಗ್ಗೆ ಚರ್ಚೆ ಆಗಲಿದೆ. ಟಿಕೆಟ್ ಫೈನಲ್ ಲಿಸ್ಟ್ ಹೈಕಮಾಂಡ್ಗೆ ತಲುಪಿದೆ ಎಂದರು.
ಧಾರವಾಡ ಕ್ಷೇತ್ರದ ವೀಕ್ಷಕಿ ಲಕ್ಷ್ಮಿ ಹೆಬ್ಬಾಳ್ಕರ್ ಲಿಸ್ಟ್ ತಲುಪಿಸಿದ್ದಾರೆ. ಹೈಕಮಾಂಡ್, ಸಿಎಂ, ಪಕ್ಷದ ಅಧ್ಯಕ್ಷರು ಸರ್ವೆ ನೋಡಿ ತೀರ್ಮಾನ ಮಾಡುತ್ತಾರೆ. ಯಾರಿಗೆ ಟಿಕೆಟ್ ಕೊಟ್ಟರೂ ನಾವೆಲ್ಲ ಒಗ್ಗಟ್ಟಾಗಿ ಪ್ರಯತ್ನ ಮಾಡುತ್ತೇವೆ ಎಂದು ಹೇಳಿದರು.
ಜೋಶಿ ಈ ಕೂಡಲೇ ತಮ್ಮ ಹೇಳಿಕೆ ವಾಪಸ್ ಪಡೆಯಬೇಕು: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಸಿಎಂ ಸಿದ್ದರಾಮಯ್ಯ ಅವರಿಗೆ ಯಾಚಿಸುವಂತೆ ಕಾರ್ಮಿಕ ಸಚಿವ ಸಂತೋಷ್ ಲಾಡ್ ಆಗ್ರಹಿಸಿದ್ದಾರೆ. ಈ ಕುರಿತು ಮಾತನಾಡಿದ ಅವರು, ಪ್ರಹ್ಲಾದ್ ಜೋಶಿ ಸಿದ್ದರಾಮಯ್ಯ ಆಡಳಿತವನ್ನು ಐಸಿಸ್ ಆಡಳಿತಕ್ಕೆ ಹೋಲಿಸಿದ್ದಾರೆ. ಶಿಗ್ಗಾವಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದ್ದಾರೆ. ಜೋಶಿ ಈ ಕೂಡಲೇ ತಮ್ಮ ಹೇಳಿಕೆ ವಾಪಸ್ ಪಡೆಯಬೇಕು ಎಂದು ಒತ್ತಾಯಿಸಿದರು.
ಅಫ್ಘಾನಿಸ್ತಾನ, ಪಾಕ್ದಲ್ಲಿ ನಡೆಯುತ್ತಿರುವ ಆಡಳಿತಕ್ಕೆ ಹೋಲಿಸಿದ್ದಾರೆ. ಅವರು ನಾಲ್ಕು ಸಲ ಎಂಪಿ ಆದವರು, ಕೇಂದ್ರದಲ್ಲಿ ಮಂತ್ರಿಯಾದವರು ನೀವು. ಪ್ರಬುದ್ಧವಾದ ಧಾರವಾಡ ಕ್ಷೇತ್ರವನ್ನು ಜೋಶಿ ಪ್ರತಿನಿಧಿಸುತ್ತಾರೆ. ನೀವು ಈ ರೀತಿ ಮಾತನಾಡುವುದು ಸರಿಯಲ್ಲ. ಸಿಎಂ ಇತ್ತೀಚೆಗೆ ಹಾರಿಕೊಂಡು ಬಂದು ಸಿಎಂ ಆದವರು ಅಲ್ಲ ಎಂದರು.
ಸಾಮಾಜಿಕ ಹೋರಾಟದ ಹಿನ್ನೆಲೆಯಿಂದ ಬಂದವರು. ಅಂಬೇಡ್ಕರ್, ಬಸವ, ಬುದ್ಧನ ತತ್ವ ಸಿದ್ಧಾಂತದ ಮೇಲೆ ಇದ್ದವರು. ಐವತ್ತು ವರ್ಷ ರಾಜ್ಯದ ರಾಜಕಾರಣದಲ್ಲಿ ಇದ್ದವರು. ಎರಡು ಸಲ ಸಿಎಂ ಆದವರು ಇಂಥವರ ಬಗ್ಗೆ ಜೋಶಿ ಮಾತನಾಡುವುದು ಸರಿಯಲ್ಲ. ಪ್ರಹ್ಲಾದ ಜೋಶಿ ಕ್ಷಮೆಯಾಚಿಸಬೇಕು. ಇಲ್ಲವೇ ತಮ್ಮ ಹೇಳಿಕೆ ವಾಪಸ್ ಪಡೆಯಬೇಕು. ಅವರಿಗೆ ಈ ಹೇಳಿಕೆ ಸರಿಯಲ್ಲ, ಸಮಂಜಸವಾಗಿದ್ದು ಅಲ್ಲ. ಕೇಂದ್ರದಲ್ಲಿ ನಿಮ್ಮದೇ ಸರ್ಕಾರ ಇದೆಯಲ್ಲ, ಐಸಿಸ್ ಆಡಳಿತವಿದ್ದರೆ ಕೇಂದ್ರದಲ್ಲಿ ನೀವು ಇದಿರಿ. ನೀವು ಇದ್ದಾಗ ರಾಜ್ಯದಲ್ಲಿ ಹೀಗೆ ಇರುತ್ತದೆ. ಹಾಗಾದ್ರೆ ನೀವು ಮತ್ತು ಮೋದಿ ರಾಜೀನಾಮೆ ಕೊಡಿ. ಇವರಿಗೆ ಹಿಂದುತ್ವ ಅಜೆಂಡಾ ಬಿಟ್ಟರೆ ಏನೂ ಇಲ್ಲ ಎಂದು ಕಿಡಿ ಕಾರಿದರು.
ಕೋವಿಡ್ ನಲ್ಲಿ ಸತ್ತವರ ಅಂತ್ಯಕ್ರಿಯೆ ಹೆಚ್ಚಾಗಿ ಮಾಡಿದವರು ಮುಸ್ಲಿಂರು. ಆಗ ಹಿಂದುವಾದಿಗಳ ಬಗ್ಗೆ ಚರ್ಚೆ ಮಾಡಿದವರು ಎಲ್ಲಿದ್ದಾರೆ. ಶ್ರೀಕಾಂತ ಪೂಜಾರಿ ಪರಮವೀರ ಚಕ್ರ ವಿಜೇತರಾ? ನೋಬೆಲ್ ಪ್ರಶಸ್ತಿ ಪುರಸ್ಕೃತರಾ, ಅವರು ಯಾರು?. ಅವರನ್ನು ನ್ಯಾಷನಲ್ ಟಿವಿಯಲ್ಲಿ ತೋರಿಸುತ್ತಿದ್ದೀರಿ. ಅವರೇನು ಗೋಲ್ಡ್ ಮೆಡಲಿಸ್ಟಾ?. ಅವರ ಮೇಲೆ ಸಾಕಷ್ಟು ಕೇಸ್ ಇವೆ. ಅದನ್ನು ರಾಷ್ಟ್ರಮಟ್ಟಕ್ಕೆ ತೆಗೆದುಕೊಂಡು ಹೊರಟಿದ್ದಾರೆ. ಇದೇನಾ ಹಿಂದುತ್ವ? ಎಂದು ಪ್ರಶ್ನಿಸಿದರು.
ಬಿಜೆಪಿಯವರಿಗೆ ತಮ್ಮ ಕಾರ್ಯಕರ್ತರನ್ನು ಬಿಟ್ಟರೆ ಅವರ ಸರ್ಕಾರದಿಂದ ಹಿಂದೂಗಳಿಗೆ ಏನೂ ಆಗಿಲ್ಲ. ರಾಮನ ಹೆಸರಿನಲ್ಲಿ ತೆಗೆದುಕೊಂಡ ಇಟ್ಟಂಗಿ ಲೆಕ್ಕ ಅವರು ಕೊಡಲಿ ಎಂದರು.
ಇದನ್ನೂ ಓದಿ: ಹಿಂದೂ ಕಾರ್ಯಕರ್ತನ ಪರ ಪ್ರತಿಭಟನೆ ಹಿಂದೆ ಜೋಶಿ ಕೈವಾಡ: ಶೆಟ್ಟರ್