ಹುಬ್ಬಳ್ಳಿ: ದೇವರು ಕೊಟ್ರು ಪೂಜಾರಿ ಕೊಡಲಿಲ್ಲ ಎನ್ನುವಂತಾಗಿದೆ ನೆರೆ ಸಂತ್ರಸ್ತರ ಸ್ಥಿತಿ. ರಾಜ್ಯ ಸರ್ಕಾರ ನೆರೆ ಸಂತ್ರಸ್ತರ ನೆರವಿಗಾಗಿ ಆಹಾರ ಪದಾರ್ಥಗಳಿರುವ ಕಿಟ್ ವಿತರಣೆ ಮಾಡಿದೆ. ಆದ್ರೆ ಕಿಟ್ ವಿತರಣೆ ವೇಳೆ ಎಡವಟ್ಟುಗಳಾಗಿದ್ದು, ಜಿಲ್ಲಾಡಳಿತ ವಿತರಿಸಿದ ಆಹಾರ ಕಿಟ್ಗಳ ಬಗ್ಗೆ ಸಂತ್ರಸ್ತರು ಸಿಟ್ಟಾಗಿದ್ದಾರೆ.
ಉತ್ತರ ಕರ್ನಾಟಕದಲ್ಲಿ ವರುಣನ ಆರ್ಭಟ ಕೊಂಚ ಮಟ್ಟಿಗೆ ತಗ್ಗಿದೆ. ಆದ್ರೆ ನೆರೆ ಸಂತ್ರಸ್ತರ ಗೋಳು ಮಾತ್ರ ಹಾಗೆಯೇ ಇದೆ. ಧಾರವಾಡ ಜಿಲ್ಲೆಯಲ್ಲಿ ಸುರಿದ ಮಳೆಯಿಂದಾಗಿ ಸಾವಿರಾರು ಕುಟುಂಬಗಳು ಬೀದಿಗೆ ಬಂದಿವೆ. ನೆರೆ ಸಂತ್ರಸ್ತರ ನೆರವಿಗಾಗಿ ಜಿಲ್ಲೆಯಲ್ಲಿ ಸುಮಾರು 34 ಸಾವಿರ ಆಹಾರ ಕಿಟ್ಗಳನ್ನ ವಿತರಣೆ ಮಾಡಲಾಗಿದೆ ಎಂದು ಜಿಲ್ಲಾಡಳಿತ ಹೇಳುತ್ತಿದೆ. ಕುಂದಗೋಳ ತಾಲೂಕಿನಲ್ಲಿ 4 ಸಾವಿರಕ್ಕು ಹೆಚ್ಚು ಆಹಾರ ಸಾಮಗ್ರಿಗಳ ಕಿಟ್ ವಿತರಣೆ ಮಾಡಲಾಗಿದೆ. ದುರಂತ ಅಂದ್ರೆ ತಾಲೂಕು ಆಡಳಿತ ವಿತರಿಸಿದ ಆಹಾರ ವಸ್ತುಗಳಿರುವ ಕಿಟ್ನಲ್ಲಿ ಸೀಮೆಎಣ್ಣೆಯೇ ಇಲ್ಲ. ತಾಲೂಕಿನಲ್ಲಿ ಒಂದಿಷ್ಟು ಕುಟುಂಬಗಳಿಗೆ ಕಿಟ್ನಲ್ಲಿರುವ ಎಲ್ಲಾ ಆಹಾರ ಸಾಮಗ್ರಿ ಸಿಕ್ಕಿದ್ರೆ, ಸಾಕಷ್ಟು ಮಂದಿಗೆ ಕಿಟ್ನಲ್ಲಿರಬೇಕಾಗಿದ್ದ 5 ಲೀಟರ್ ಸೀಮೆಎಣ್ಣೆ ವಿತರಣೆಯಾಗಿಲ್ಲ. ಕೇವಲ ಲೇಬಲ್ ಹಚ್ಚಿ ಖಾಲಿ ಕ್ಯಾನ್ ಮಾತ್ರ ವಿತರಣೆ ಮಾಡಲಾಗಿದೆ ಎನ್ನಲಾಗಿದೆ.
ಸರ್ಕಾರ ವಿತರಿಸುವ ಆಹಾರ ಸಾಮಗ್ರಿಗಳ ಕಿಟ್ನಲ್ಲಿ 10 ಕೆಜಿ ಅಕ್ಕಿ, 1 ಕೆಜಿ ತೊಗರಿ ಬೆಳೆ, 1 ಕೆಜಿ ಸಕ್ಕರೆ, 1 ಕೆಜಿ ಉಪ್ಪು, 1 ಕೆಜಿ ತಾಳೆ ಎಣ್ಣೆ ಹಾಗೂ 5 ಲೀಟರ್ ಸೀಮೆಎಣ್ಣೆ ಇರಬೇಕು. ಆದ್ರೆ ಕುಂದಗೋಳ ತಾಲೂಕಿನಲ್ಲಿ ವಿತರಣೆಯಾಗಿರುವ ಕಿಟ್ನಲ್ಲಿರಬೇಕಾಗಿದ್ದ 5 ಲೀಟರ್ ಸೀಮೆಎಣ್ಣೆ ಕೆಲವರಿಗೆ ಸಿಕ್ಕಿಲ್ಲ. ಸೀಮೆಎಣ್ಣೆ ಇಲ್ಲದ ಖಾಲಿ ಕ್ಯಾನ್ ವಿತರಣೆ ಮಾಡಿದ್ದು ಯಾಕೆ ಎಂದು ನೆರೆ ಸಂತ್ರಸ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸೀಮೆಎಣ್ಣೆ ಸಿಗದೆ ರಾತ್ರಿ ಕತ್ತಲೆಯಲ್ಲಿಯೇ ಜೀವನ ಸಾಗಿಸುವ ಸ್ಥಿತಿ ನಿರ್ಮಾಣವಾಗಿದೆ.
ಮಳೆಯಿಂದಾಗಿ ನೆರೆ ಸಂತ್ರಸ್ತರ ಬದುಕು ಬೀದಿಗೆ ಬಂದಿದೆ. ಆದ್ರೆ ಸರ್ಕಾರ ನೀಡಿರುವ ಪರಿಹಾರ ನೆರೆ ಸಂತ್ರಸ್ತರಿಗೆ ಸರಿಯಾಗಿ ಮುಟ್ಟದಿರುವುದು ನೆರೆ ಸಂತ್ರಸ್ತರ ಬದುಕನ್ನ ಮತ್ತಷ್ಟು ಕತ್ತಲೆಗೆ ನೂಕಿದೆ. ಇನ್ನಾದ್ರೂ ಎಚ್ಚೆತ್ತುಕೊಂಡು ಅಧಿಕಾರಿಗಳು ತಕ್ಷಣವೇ ನೆರೆ ಸಂತ್ರಸ್ತರಿಗೆ ನೆರವಾಗಬೇಕಾಗಿದೆ.