ಹುಬ್ಬಳ್ಳಿ : ವಿದ್ಯುತ್ ತಂತಿ ತಗುಲಿ ಅಪಾರ ಪ್ರಮಾಣದ ಕಬ್ಬು ಬೆಂಕಿಗಾಹುತಿಯಾಗಿರುವ ಘಟನೆ ಕಲಘಟಗಿ ತಾಲೂಕಿನ ಮಲಕನಕೊಪ್ಪ ಗ್ರಾಮದಲ್ಲಿ ನಡೆದಿದೆ. ನಿಂಗಪ್ಪ ಭರಮಪ್ಪ ಕುರಿಯವರ ಎಂಬುವರಿಗೆ ಸೇರಿದ ಕಬ್ಬಿನ ಹೊಲದಲ್ಲಿ ಈ ಅವಘಡ ಸಂಭವಿಸಿದೆ.
ಕಬ್ಬಿನ ಹೊಲದಲ್ಲಿ ವಿದ್ಯುತ್ ಕಂಬಗಳು ಹಾಗೂ ಟ್ರಾನ್ಸ್ಫಾರ್ಮರ್ ಇದ್ದಿದ್ದರಿಂದ ಶಾರ್ಟ್ ಸರ್ಕ್ಯೂಟ್ ಆಗಿ 2 ಎಕರೆಯಲ್ಲಿ ಬೆಳೆದ ಕಬ್ಬು ಸಂಪೂರ್ಣ ಬೆಂಕಿ ಆವರಿಸಿ ಸುಟ್ಟು ಅಪಾರ ನಷ್ಟ ಸಂಭವಿಸಿದೆ. ಈ ಅವಘಡಕ್ಕೆ ಹೆಸ್ಕಾಂ ನಿರ್ಲಕ್ಷ ಕಾರಣ ಎಂದು ಆರೋಪಿಸಲಾಗಿದ್ದು, ಸಂಬಂಧಪಟ್ಟ ಹೆಸ್ಕಾಂ ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿ ಪರಿಹಾರ ನೀಡಬೇಕೆಂದು ರೈತರು ಒತ್ತಾಯಿಸಿದ್ದಾರೆ.
ಆಕಸ್ಮಿಕವಾಗಿ ವಿದ್ಯುತ್ ತಗುಲಿ ಕಬ್ಬು ಬೆಂಕಿಗಾಹುತಿ : ಆಕಸ್ಮಿಕವಾಗಿ ವಿದ್ಯುತ್ ತಗುಲಿ ಕಬ್ಬು ಸಂಪೂರ್ಣವಾಗಿ ಬೆಂಕಿಗಾಹುತಿಯಾಗಿರುವ ಘಟನೆ ಮೈಸೂರು ಜಿಲ್ಲೆಯ ತಿ.ನರಸೀಪುರ ತಾಲೂಕಿನ ಕುರುಬೂರು ಗ್ರಾಮದಲ್ಲಿ ನಡೆದಿದೆ. ಕುರುಬೂರು ಗ್ರಾಮದ ಶಾಂತರಾಜ್ ಎಂಬುವರು ಎರಡು ಎಕರೆ ಜಮೀನನಲ್ಲಿ ಬೆಳೆದಿದ್ದ ಕಬ್ಬಿನ ಬೆಳೆಗೆ, ಆಕಸ್ಮಿಕವಾಗಿ ವಿದ್ಯುತ್ ತಗುಲಿದ್ದರಿಂದ ಕಬ್ಬು ಸುಟ್ಟು ಭಸ್ಮವಾಗಿದೆ.
ಅಗ್ನಿಶಾಮಕ ದಳದ ಸಿಬ್ಬಂದಿ ಬರುವ ಅಷ್ಟರೊಳಗೆ ಕಬ್ಬು ಬೆಂಕಿಗಾಹುತಿಯಾಗಿದೆ. ಕಬ್ಬು ಸುಟ್ಟು ಭಸ್ಮವಾಗಿರುವುದರಿಂದ ರೈತ ಶಾಂತರಾಜ್ ಕಂಗಾಲಾಗಿದ್ದು, ಪರಿಹಾರ ನೀಡುವಂತೆ ತಾಲೂಕು ಆಡಳಿತಕ್ಕೆ ಒತ್ತಾಯಿಸಿದ್ದಾರೆ.