ಹುಬ್ಬಳ್ಳಿ:ಫ್ಯಾಷನ್ ಲೋಕ ಅಂದ್ರೆ ಅದು ರಂಗು ರಂಗಿನ ದುನಿಯಾ. ಜಗಮಗಿಸುವ ಲೈಟ್ಗಳ ನಡುವೆ ನಡೆಯುತ್ತಿದ್ದ ಫ್ಯಾಷನ್ ಶೋಗಳಿಗೀಗ ಕೊರೊನಾ ಕರಿಛಾಯೆ ಆವರಿಸಿದೆ.
ಹೌದು. ಕೊರೊನಾ ಮಹಾಮಾರಿಯ ಎಫೆಕ್ಟ್ ಫ್ಯಾಷನ್ ಕ್ಷೇತ್ರದ ಮೇಲೂ ಬಿದ್ದಿದೆ. ಫ್ಯಾಷನ್ ಕ್ಷೇತ್ರ ನಂಬಿದವರು ಇದರಿಂದ ಹೊರಬರಲು ಸಾಧ್ಯವಾಗುತ್ತಿಲ್ಲ. ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಪ್ರತಿ ತಿಂಗಳು ಸಾಕಷ್ಟು ಫ್ಯಾಷನ್ ಶೋಗಳು ಆಯೋಜನೆಗೊಳ್ಳುತ್ತಿದ್ದವು. ಇದರಿಂದ ಹೊಸ ಹೊಸ ಪ್ರತಿಭೆಗಳು ಹೊರಬಂದು ಫ್ಯಾಷನ್ ಹಾಗೂ ಮಾಡೆಲಿಂಗ್ ಕ್ಷೇತ್ರದಲ್ಲಿ ಹೆಸರು ಮಾಡಲು ವೇದಿಕೆ ಸಿಕ್ಕಂತಾಗುತ್ತಿತ್ತು. ಆದ್ರೆ ಈಗ ಕೊರೊನಾ ಭೀತಿ ಹಿನ್ನೆಲೆಯಲ್ಲಿ ಫ್ಯಾಷನ್ ಶೋಗಳು ಸೇರಿದಂತೆ ಇತರೆ ಕಾರ್ಯಕ್ರಮಗಳನ್ನು ನಡೆಸಲು ಸಾಧ್ಯವಾಗುತ್ತಿಲ್ಲ.
ಕೆಲವು ಫ್ಯಾಷನ್ ಶೋಗಳನ್ನು ಆನ್ಲೈನ್ ನಲ್ಲಿಯೇ ಆಯೋಜನೆ ಮಾಡಲಾಗುತ್ತಿದೆ. ಆದ್ರೆ ಆಫ್ಲೈನ್ನಲ್ಲಿ ಮಾಡಿದಷ್ಟು ಎಫೆಕ್ಟಿವ್ ಆಗಿ ಪ್ರದರ್ಶಗೊಳ್ಳುತ್ತಿಲ್ಲ. ಫೋಟೋ ಶೂಟ್ ಸೇರಿದಂತೆ ಹಲವು ಅಡೆತಡೆಗಳನ್ನು ಆನ್ಲೈನ್ ಮೋಡ್ ನಲ್ಲಿ ಎದುರಿಸಲಾಗುತ್ತಿದೆ.
ಅದರಲ್ಲೂ ಫ್ಯಾಷನ್ ನಿಂದಲೇ ಜೀವನ ಕಂಡುಕೊಳ್ಳಬೇಕು ಯಶಸ್ಸು ಸಾಧಿಸಬೇಕು ಅಂದುಕೊಂಡ ಹಲವು ಯುವಕ, ಯುವತಿಯರು ಅವಕಾಶಗಳಿಂದ ವಂಚಿತರಾಗಿದ್ದಾರೆ. ಹಲವು ಪ್ರಾಜೆಕ್ಟ್ಗಳು ಕೈ ತಪ್ಪಿ ಹೋಗಿವೆ. ಜೀವನ ನಿರ್ವಹಣೆ ಕಷ್ಟವಾಗಿದೆ ಎಂದು ತಮ್ಮ ನಿರಾಸೆಯನ್ನು ತೋಡಿಕೊಳ್ಳುತ್ತಿದ್ದಾರೆ.
ಫ್ಯಾಷನ್ ಡಿಸೈನರ್ ಗಳು ಹಾಗೂ ಆಯೋಜಕರಿಂದ ಸರ್ಕಾರ ಕೆಲವು ಮಾರ್ಗಸೂಚಿ ಹಾಗೂ ನಿರ್ದೇಶನಗಳ ಮೇಲೆ ಶೋಗಳನ್ನು ನಡೆಸಲು ಅವಕಾಶ ನೀಡಬೇಕು ಎಂಬ ಒತ್ತಾಯವೂ ಕೇಳಿ ಬರುತ್ತಿದೆ.