ಧಾರವಾಡ: ರಾಜ್ಯದಲ್ಲಿ ಬರದ ಛಾಯೆ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಬರಪೀಡಿತ ತಾಲೂಕುಗಳನ್ನು ಘೋಷಿಸಿದ್ದು, ಇದರಿಂದ ಹೊರಗುಳಿದ ಜಿಲ್ಲೆಯ ಕೆಲ ತಾಲೂಕುಗಳ ರೈತರು ಆಕ್ರೋಶಗೊಂಡಿದ್ದಾರೆ.
ಸರ್ಕಾರ ತೀವ್ರ ಮತ್ತು ಸಾಧಾರಣ ಬರ ತಾಲೂಕುಗಳ ಪಟ್ಟಿ ಬಿಡುಗಡೆ ಮಾಡಿದೆ. ಇದರಲ್ಲಿ ಜಿಲ್ಲೆಯ ಮೂರು ತಾಲೂಕುಗಳು ಹೊರಗುಳಿದಿವೆ. ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಪ್ರತಿನಿಧಿಸುವ ಕಲಘಟಗಿ, ಅಳ್ನಾವರವನ್ನು ಬರಪೀಡಿತ ತಾಲೂಕುಗಳ ಪಟ್ಟಿಯಿಂದ ಹೊರಗಿಡಲಾಗಿದೆ. ಇನ್ನು ನವಲಗುಂದ ವಿಧಾನಸಭಾ ವ್ಯಾಪ್ತಿಯ ಅಣ್ಣಿಗೇರಿ ತಾಲೂಕು ಕೂಡ ಬರದ ಲಿಸ್ಟ್‌ನಿಂದ ಹೊರಗುಳಿದಿದೆ.
ಆದರೆ ಮೂರು ತಾಲೂಕಿನಲ್ಲಿಯೂ ಸಹ ಸರಿಯಾಗಿ ಮಳೆಯಾಗದ ಹಿನ್ನೆಲೆಯಲ್ಲಿ ಬೆಳೆ ಬಂದಿಲ್ಲ. ಹೀಗಾಗಿ ಮೂರು ತಾಲೂಕುಗಳನ್ನು ಬರಗಾಲ ಪೀಡಿತ ತಾಲೂಕುಗಳ ಪಟ್ಟಿಯಲ್ಲಿ ಸೇರಿಸಬೇಕು ಎಂದು ರೈತರು ಆಗ್ರಹಿಸಿದ್ದಾರೆ. ಅಳ್ನಾವರ ಭಾಗದ ಹೊನ್ನಾಪೂರ ಗ್ರಾಮದಲ್ಲಿ ಕಬ್ಬು, ಭತ್ತ ಸೇರಿದಂತೆ ವಿವಿಧ ಬೆಳೆ ಮಳೆಯ ಅಭಾವದಿಂದ ಒಣಗುತ್ತಿದೆ. ಇದರಿಂದ ಜಮೀನಿಗೆ ಖರ್ಚು ಮಾಡಿದ ಹಣವೂ ಸಹ ಸಿಗುವುದಿಲ್ಲ ಎಂದು ರೈತರು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.
ಅಳ್ನಾವರ ತಾಲೂಕಿನ ಹಳ್ಳಿಗಳ ಪಕ್ಕದಲ್ಲಿನ ಧಾರವಾಡ ತಾಲೂಕಿನ ಕೆಲ ಹಳ್ಳಿಗಳಲ್ಲಿ ಹಲವು ರೈತರ ಜಮೀನಿದೆ. ಧಾರವಾಡ ತಾಲೂಕು ಬರಪೀಡಿತ ಆಗಿದೆ. ಆದರೆ ಅದಕ್ಕೆ ಹೊಂದಿಕೊಂಡಿರುವ ಅಳ್ನಾವರ ತಾಲೂಕು ಬರಗಾಲದ ಪಟ್ಟಿಯಿಂದ ಹೊರಗಿದೆ. ಇದರಿಂದಾಗಿ ತಮಗೆ ಅನ್ಯಾಯವಾಗುತ್ತಿದೆ ಎಂದು ರೈತರು ಬೇಸರ ವ್ಯಕ್ತಪಡಿಸಿದರು. ಮಳೆಯೇ ಆಗಿಲ್ಲ, ಆದರೂ ಮಳೆಯಾಗಿದೆ ಎಂದು ಬರದಿಂದ ಹೊರಗೆ ಇಟ್ಟಿದ್ದಾರೆ. ಅಧಿಕಾರಿಗಳು ಫೀಲ್ಡ್‌ಗೆ ಬಂದು ಸರ್ವೆ ಮಾಡಿಲ್ಲ ಎಂದು ರೈತರು ಆರೋಪಿಸಿದ್ದಾರೆ.
ರೈತ ಸದಾಶಿವ ಹೊಳೆಣ್ಣವರ ಮಾತನಾಡಿ, ಅಳ್ನಾವರ ತಾಲೂಕಿನಲ್ಲಿ ಒಂದೆರಡೆಕರೆ ಜಮೀನಿದೆ. ಬಿತ್ತನೆ ಸಮಯದಲ್ಲಿ ಸ್ವಲ್ಪ ಮಳೆಯಾಗಿದ್ದು ಬಿಟ್ಟರೆ ಮತ್ತೆ ಆಗಿಲ್ಲ. ನಾಟಿದ್ದ ಬೆಳೆಗಳು ನಾಶವಾಗಿವೆ. ಸರ್ಕಾರ ಅಳ್ನಾವರ ತಾಲೂಕನ್ನು ಬರಗಾಲ ಪೀಡಿತ ತಾಲೂಕು ಎಂದು ಘೋಷಣೆ ಮಾಡಬೇಕು. ಇಲ್ಲಿ ಹಿಂಗಾರು ಬೆಳೆ ಬರುವುದಿಲ್ಲ, ನಾವು ಒಂದೇ ಬೆಳೆ ನಂಬಿಕೊಂಡಿದ್ದೇವೆ ಎಂದು ಹೇಳಿದರು.
ರೈತ ಬಸವರಾಜ ಕಲಾಜ್ ಮಾತನಾಡಿ, ಅಳ್ನಾವರ ತಾಲೂಕನ್ನು ಸರ್ಕಾರ ಬರಪೀಡಿತ ತಾಲೂಕು ಎಂದು ಘೋಷಣೆ ಮಾಡಿಲ್ಲ. ಈ ತಾಲೂಕನ್ನು ಬರಪೀಡಿತ ಎಂದು ಘೋಷಣೆ ಮಾಡಬೇಕು ಎಂದು ವಿನಂತಿ ಮಾಡಿಕೊಳ್ಳುತ್ತೇವೆ. ಮಳೆಯಾಗದಿರುವುದರಿಂದ ಕಬ್ಬು, ಭಕ್ತ, ಗೊಂಜಾಳು ಬೆಳೆ ಒಣಗುತ್ತಿದೆ ಎಂದು ಅಳಲು ತೋಡಿಕೊಂಡರು.
'ಅಣ್ಣಿಗೇರಿಯನ್ನು ಬರಪೀಡಿತ ತಾಲೂಕು ಎಂದು ಘೋಷಿಸಿ': ಮತ್ತೊಂದೆಡೆ, ರಾಜ್ಯ ಸರ್ಕಾರದ ಬರ ಪಟ್ಟಿಯಿಂದ ಅಣ್ಣಿಗೇರಿಯನ್ನು ಸೇರಿಸದ ಹಿನ್ನೆಲೆಯಲ್ಲಿ ನವಲಗುಂದ ಶಾಸಕ ಎನ್.ಎಚ್. ಕೊನರೆಡ್ಡಿ ಸಿಎಂ ಸಿದ್ದರಾಮಯ್ಯ ಮೊರೆ ಹೋಗಿದ್ದಾರೆ. ನವಲಗುಂದ ಕ್ಷೇತ್ರದ ವ್ಯಾಪ್ತಿಯ ಅಣ್ಣಿಗೇರಿ ತಾಲೂಕು ಲಿಸ್ಟ್‌ನಿಂದ ಹೊರಗಿದೆ. ಈ ಹಿನ್ನೆಲೆಯಲ್ಲಿ ಅಣ್ಣಿಗೇರಿಯನ್ನು ಬರಪೀಡಿತ ತಾಲೂಕು ಎಂದು ಘೋಷಿಸುವಂತೆ ಶಾಸಕ ಕೋನರೆಡ್ಡಿ ಸಿಎಂಗೆ ಮನವಿ ಮಾಡಿದ್ದಾರೆ.
ಇದನ್ನೂ ಓದಿ: ಬರಪೀಡಿತ ಪಟ್ಟಿಯಲ್ಲಿಲ್ಲ ಬೆಳಗಾವಿ, ಖಾನಾಪುರ: ಸರ್ಕಾರದ ವಿರುದ್ಧ ರೈತರ ಆಕ್ರೋಶ