ಧಾರವಾಡ: ಧಾರವಾಡ ಮತ್ತು ಬೆಳಗಾವಿ ಮಧ್ಯೆ ನೇರ ಸಂಪರ್ಕ ಕಲ್ಪಿಸುವ ನೂತನ ರೈಲು ಮಾರ್ಗದಿಂದ ರೈತರು ಭೂಮಿ ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ.
ಧಾರವಾಡ ತಾಲೂಕಿನ ಹಿರೇಮಲ್ಲಿಗೆವಾಡ, ಕೆಲಗೇರಿ ಭಾಗ 1 ಮತ್ತು ಭಾಗ 2 ಗ್ರಾಮಗಳ ನೂರಾರು ಎಕರೆ ಜಮೀನು ರೈಲು ಮಾರ್ಗ ನಿರ್ಮಾಣಕ್ಕೆ ಬೇಕಾಗುತ್ತದೆ. ರೈಲು ಸಂಚರಿಸಬೇಕಾದ ಊರಿನಲ್ಲಿ ಭೂಮಿ ಕಳೆದುಕೊಳ್ಳುವ ರೈತರು ಮಾರ್ಗ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಈ ಯೋಜನೆಗೆ ಕೆಲ ಅಡಚಣೆಗಳುಂಟಾಗುವ ಸಾಧ್ಯತೆಗಳಿವೆ.
ಈಗಾಗಲೇ ಧಾರವಾಡ-ಬೆಳಗಾವಿ ನೇರ ರೈಲು ಮಾರ್ಗ ಯೋಜನೆಗೆ ರಾಜ್ಯ ಸರ್ಕಾರ ಬಜೆಟ್ನಲ್ಲಿ ಹಣ ಮೀಸಲಿರಿಸಿದೆ. ರೈಲ್ವೆ ಇಲಾಖೆ ಸಹ ಸರ್ವೆ ಮಾಡಿ, ಅಲ್ಲಲ್ಲಿ ಗುರುತು ಕಲ್ಲುಗಳನ್ನು ಹಾಕಿದೆ. ಕಲ್ಲು ಹಾಕಿದ ಬಳಿಕ ಗ್ರಾಮಸ್ಥರಲ್ಲಿ ಭೂಮಿ ಕಳೆದುಕೊಳ್ಳುವ ಆತಂಕ ಹೆಚ್ಚಾಗಿದೆ. ಹಿರೇಮಲ್ಲಿಗೆವಾಡ ಗ್ರಾಮಸ್ಥರು ಈಗಾಗಲೇ ಐಐಟಿಗಾಗಿ ನೂರಾರು ಎಕರೆ ಜಮೀನು ಕಳೆದುಕೊಂಡಿದ್ದಾರೆ. ಈಗ ಉಳಿದ ಜಮೀನಿನಲ್ಲಿ ಕೃಷಿ ಮಾಡಿಕೊಂಡಿದ್ದು, ಇದೀಗ ರೈಲು ಮಾರ್ಗ ಯೋಜನೆಯಿಂದ ಮತ್ತೆ ಸಂಕಷ್ಟ ಎದುರಿಸುವಂತಾಗಿದೆ.
ಸದ್ಯ ರೈತರು ಈ ಯೋಜನೆಗೆ ವಿರೋಧ ವ್ಯಕ್ತಪಡಿಸುತ್ತಿದ್ದು, ಅಧಿಕಾರಿಗಳು, ಜನಪ್ರತಿನಿಧಿಗಳು ಯಾವ ರೀತಿ ಕ್ರಮ ಕೈಗೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.