ಹುಬ್ಬಳ್ಳಿ: ಒಂದು ಕಡೆ ಮಳೆ ಸೃಷ್ಟಿಸಿದ ಅವಾಂತರ. ಮತ್ತೊಂದೆಡೆ ಕೊರೊನಾ ಎಂಬ ಮಹಾಮಾರಿಯ ಭೀತಿ. ಇದರ ನಡುವೆಯೂ ರೈತರು ಶೀಗೆಹುಣ್ಣಿಮೆ ಹಬ್ಬವನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಿದ್ದಾರೆ.
ಮಳೆಯಿಂದ ಬೆಳೆ ಕಳೆದುಕೊಂಡಿರುವ ಅನ್ನದಾತ ಇಂದು ಭೂಮಿತಾಯಿಗೆ ಪೂಜೆ ಸಲ್ಲಿಸುವ ದೃಶ್ಯ ಜಿಲ್ಲೆಯ ಹಲವೆಡೆ ಕಂಡು ಬಂದಿದೆ. ದಸರಾ ಮತ್ತು ದೀಪಾವಳಿಯ ನಡುವೆ ಬರುವ ಭೂಮಿಹುಣ್ಣಿಮೆ ರೈತ ತನ್ನ ಕೃಷಿ ಭೂಮಿಗೆ ಅರ್ಪಿಸುವ ಕೃತಜ್ಞತೆ ಅಂತಲೇ ಕರೆಯಲಾಗುತ್ತದೆ.
ಶ್ರಾವಣ ಮಾಸದ ಪೂರ್ವದಲ್ಲಿ ಸುರಿಯುವ ಮುಂಗಾರು ಮಳೆಯ ಸಂದರ್ಭದಲ್ಲಿ, ಬಿತ್ತಿದ ಬೀಜ ಮೊಳಕೆ ಒಡೆದು ಆಶ್ವೀಜ ಕೊನೆಯಾರ್ದದಲ್ಲಿ ಬೆಳೆದ ಪೈರು ರೈತನ ಮೊಗದಲ್ಲಿ ಮಂದಹಾಸ ಬೀರಿಸುತ್ತದೆ. ಆಗ ಭೂಮಿತಾಯಿ ತುಂಬು ಗರ್ಭಿಣಿಯಂತೆ ಕಂಗೊಳಿಸುತ್ತಾಳೆ. ಆಶ್ವೀಜ ಮಾಸದಲ್ಲಿ ಬರುವ ಸೀಗೆ ಹುಣ್ಣಿಮೆಯಲ್ಲಿ, ಭೂಮಿತಾಯಿಗೆ ಸೀಮಂತ ಮಾಡುವ ವಿಶಿಷ್ಟ ಸಂಪ್ರದಾಯವೇ ಸೀಗೆ ಹುಣ್ಣಿಮೆಯಾಗಿದೆ.
ಈ ಹಬ್ಬದಲ್ಲಿ ಭೂಮಿ ತಾಯಿಗೆ ಹೊಸ ಸೀರೆ ಉಡಿಸಿ, ವಿವಿಧ ರೀತಿಯ ತಿನಿಸುಗಳ ನೈವೇದ್ಯ ಮಾಡಿ, 5 ರೀತಿಯ ತರಕಾರಿ ಪಲ್ಯ, ಅದರಲ್ಲೂ ಬದನೆಕಾಯಿ ಮತ್ತು ಪುಂಡಿಸೊಪ್ಪಿನ ಪಲ್ಯ ಕಡ್ಡಾಯವಾಗಿ ಮಾಡುತ್ತಾರೆ. ಹೀಗೆ ಹಲವಾರು ರೀತಿಯ ತಿನಿಸು ಮಾಡಿಕೊಂಡು ಮನೆಯವರೆಲ್ಲರೂ ಎತ್ತಿನ ಗಾಡಿ ಅಥವಾ ಟ್ರ್ಯಾಕ್ಟರ್ ಮೇಲೆ ತಮ್ಮ ಹೊಲಕ್ಕೆ ಬಂದು ಭೂಮಿತಾಯಿಯ ಪೂಜೆ ಮಾಡುತ್ತಾರೆ.