ಹುಬ್ಬಳ್ಳಿ: ಬೆಳೆ ಹಾನಿಯಾಗಿ ಎರಡು ತಿಂಗಳು ಕಳೆದರೂ ಕೂಡ ಪರಿಹಾರದ ಹಣ ಮಾತ್ರ ಪಲಾನುಭವಿ ರೈತನ ಕೈ ಸೇರುತ್ತಿಲ್ಲ. ನಿರೀಕ್ಷೆಯ ಬೆನ್ನತ್ತಿ ಬ್ಯಾಂಕ್, ಸರ್ಕಾರಿ ಕಚೇರಿಗಳನ್ನ ಅಲೆದು ರೈತನ ಚಪ್ಪಲಿ ಸವೆಯುತ್ತಿವೇ ವಿನಃ ಬೆಳೆ ವಿಮೆ ಅಥವಾ ಫಸಲು ಭೀಮಾ ಯೋಜನೆಗಳು ಅರ್ಥಿಕ ನೆರವಿಗೆ ಬಂದಿಲ್ಲ ಎಂದು ರೈತರು ಆರೋಪಿಸುತ್ತಿದ್ದಾರೆ.
ಈಗಾಗಲೇ ಭಾರೀ ಮಳೆಯಿಂದ ಕಷ್ಟ ಅನುಭವಿಸಿದ್ದ ರೈತನಿಗೆ ಈಗ ಬೆಳೆ ನಷ್ಟದ ಹೊಡೆತ. ಇನ್ನೂ ರೈತರ ನೆರವಿಗೆ ನಿಲ್ಲುತ್ತೇವೆ. ರೈತರಿಗಾಗೇ ನಮ್ಮ ಸರ್ಕಾರ ಎಂದೆಲ್ಲ ವೋಟು ಗಿಟ್ಟಿಸಿಕೊಳ್ಳುವ ಯಾವುದೇ ಸರ್ಕಾರ ಅಥವಾ ಸರ್ಕಾರಿ ಯೋಜನೆಗಳು ನಮ್ಮ ನೆರವಿಗೆ ಬರುತ್ತಿಲ್ಲ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.
ಅಷ್ಟೇಅಲ್ಲದೇ, ಸರ್ಕಾರ ರೈತರಿಗೆ ಅಷ್ಟು ಕೋಟಿ ಇಷ್ಟು ಕೋಟಿ ಹಣ ಬಿಡುಗಡೆ ಮಾಡಿದೆ ಎಂದು ಹೇಳಿಕೊಳ್ಳುತ್ತಿದೆ ಹೊರತು ಯಾವುದೇ ಹಣ ರೈತನ ಕೈಗೆ ಸೇರಿಲ್ಲ. 2018ರ ಫಸಲು ಭಿಮಾ ಯೋಜನೆಯ ಹಣ ಕೆಲವೊಬ್ಬರಿಗೆ ಕೈ ಸೇರಿದ್ರೆ ಇನ್ನು ಕೆಲವರಿಗೆ ಸಿಕ್ಕಿಲ್ಲ. ಇನ್ನಾದರೂ ರೈತರ ಕಡೆ ಗಮನ ಹರಿಸಿ ಕೂಡಲೇ ಸರ್ಕಾರ ರೈತರಿಗೆ ಬೆಳೆ ಪರಿಹಾರವನ್ನು ಒದಗಿಸಬೇಕು ಎಂದು ರೈತರು ಒತ್ತಾಯಿಸುತ್ತಿದ್ದಾರೆ.