ಧಾರವಾಡ: ತಾಲೂಕಿನ ಅಂಬೊಳ್ಳಿ ಗ್ರಾಮದ ರೈತರೊಬ್ಬರು ತಮ್ಮ 2 ಎಕರೆ 20 ಗುಂಟೆ ಜಮೀನಿನಲ್ಲಿ ರಾಷ್ಟ್ರೀಯ ತೋಟಗಾರಿಕೆ ಮಿಷನ್ ನೆರವು ಪಡೆದು ಬೆಳೆದ ಅಂಗಾಂಶ ಬಾಳೆಯು ಸುಮಾರು 110 ಟನ್ ಇಳುವರಿ ನೀಡಿ, 8 ಲಕ್ಷ ರೂ.ಗಳಿಗೂ ಅಧಿಕ ಆದಾಯ ನೀಡಿದೆ.
ಅಂಬೊಳ್ಳಿ ಗ್ರಾಮದ ವಿಶ್ವಂಬರ ಬನ್ಸಿ ಅವರು ತಮ್ಮ ಎರಡು ಎಕರೆ 20 ಗುಂಟೆ ಭೂಮಿಯನ್ನು ಅಂಗಾಂಶ ಬಾಳೆಯ ಹೊಸ ತೋಟವಾಗಿ ಅಭಿವೃದ್ಧಿ ಪಡಿಸಲು ತೋಟಗಾರಿಕೆ ಇಲಾಖೆ ಮೂಲಕ ರಾಷ್ಟ್ರೀಯ ತೋಟಗಾರಿಕೆ ಮಿಷನ್ ಅಡಿ 2020-21 ನೇ ಸಾಲಿನಲ್ಲಿ ಹೊಸ ತೋಟ ನಿರ್ಮಿಸಿಕೊಳ್ಳಲು 30,600 ರೂ. ಅನುದಾನ ಪಡೆದಿದ್ದರು.
ಸಾಂಪ್ರದಾಯಿಕವಾಗಿ ಬೆಳೆಯುತ್ತಿದ್ದ ಕಬ್ಬು ಕೈಬಿಟ್ಟು ಬೆಳೆದ ಬಾಳೆಯು ಪ್ರತಿ ಗೊನೆಗೆ ಸರಾಸರಿ 30-35 ಕೆಜಿ ಇಳುವರಿ ನೀಡಿದೆ. ಈವರೆಗೆ 100 ರಿಂದ 110 ಟನ್ ಬಾಳೆ ಕಟಾವು ಮಾಡಿ 8,80,000 ರೂ.ಮೌಲ್ಯದ ಉತ್ಪನ್ನ ಬಂದಿದೆ. ಮೊದಲನೇ ವರ್ಷದ ಖರ್ಚು ತೆಗೆದು ಸುಮಾರು 7 ಲಕ್ಷ ರೂ.ನಿವ್ವಳ ಆದಾಯ ಬಂದಿದೆ.
ಬಾಳೆ ಬೆಳೆಗೆ ತಾಂತ್ರಿಕ ಸಲಹೆ: ಎನ್ ಹೆಚ್ ಎಂ ಅಡಿ ಹೊಸ ತೋಟಗಾರಿಕೆ ಪ್ರದೇಶ ವಿಸ್ತರಣೆಗೆ ಸಹಾಯಧನ ಹಾಗೂ ಕಾಲಕಾಲಕ್ಕೆ ಬಾಳೆ ಬೆಳೆಗೆ ತಾಂತ್ರಿಕ ಸಲಹೆಗಳನ್ನು ನೀಡಲಾಗಿದೆ ಎಂದು ಹೋಬಳಿ ಮಟ್ಟದ ತೋಟಗಾರಿಕೆ ಅಧಿಕಾರಿ ವೈ. ಎ. ಕುರುಬೆಟ್ಟ ತಿಳಿಸಿದ್ದಾರೆ.
ನರೇಗಾ ಯೋಜನೆಯಲ್ಲಿ ಸಾಕಷ್ಟು ಅವಕಾಶ: ಕೊರೊನಾದ ಈ ಸಂಕಷ್ಟದ ದಿನಗಳಲ್ಲಿಯೂ ತೋಟಗಾರಿಕೆ ಬೆಳೆಗಳನ್ನು ಬೆಳೆದು ರೈತರು ಯಶಸ್ಸು ಸಾಧಿಸಿರುವುದು ಮಾದರಿಯಾಗಿದೆ. ಹಣ್ಣು, ಹೂವಿನ ತೋಟಗಳನ್ನು ಹೊಸದಾಗಿ ನಿರ್ಮಿಸಿಕೊಳ್ಳಲು ನರೇಗಾ ಯೋಜನೆಯಲ್ಲಿ ಸಾಕಷ್ಟು ಅವಕಾಶಗಳಿವೆ.
ರಿಯಾಯಿತಿ ದರದಲ್ಲಿ ವಿತರಣೆ: ಮಾವು, ಪೇರಲ, ಲಿಂಬು, ಕರಿಬೇವಿನ ಸಸಿಗಳನ್ನು ಇಲಾಖೆಯ ನರ್ಸರಿಗಳಿಂದ ರಿಯಾಯಿತಿ ದರದಲ್ಲಿ ವಿತರಿಸಲಾಗುತ್ತಿದೆ. ರೈತರು ಹತ್ತಿರದ ತೋಟಗಾರಿಕೆ ಅಧಿಕಾರಿ, ಸಿಬ್ಬಂದಿಯನ್ನು ಸಂಪರ್ಕಿಸಬಹುದು ಎಂದು ಹಿರಿಯ ತೋಟಗಾರಿಕೆ ಸಹಾಯಕ ನಿರ್ದೇಶಕ ಶಿವಯೋಗಿ ಮನವಿ ಮಾಡಿದ್ದಾರೆ.
ಓದಿ: ಶಿಕ್ಷಕರಾಗಲು ಬಯಸುವ ಆಕಾಂಕ್ಷಿಗಳಿಗೆ ಗುಡ್ ನ್ಯೂಸ್.. TET ಪರೀಕ್ಷೆ ದಿನಾಂಕ ಘೋಷಣೆ