ಧಾರವಾಡ: ರೈತನೋರ್ವ ತನ್ನ ಮನೆಯ ಮಗನಂತಿರುವ ಎತ್ತಿನ (ಬಸವ) ಜನ್ಮದಿನ ಆಚರಿಸಿ ಸಂಭ್ರಮಿಸಿದ್ದಾರೆ. ಧಾರವಾಡ ತಾಲೂಕಿನ ದೇವರ ಹುಬ್ಬಳ್ಳಿ ಗ್ರಾಮದ ರೈತ ನಾಗಪ್ಪ ಎಂಬುವರ ಮನೆಯಲ್ಲಿ ಸುಮಾರು 13 ವರ್ಷಗಳ ಕಾಲ ದುಡಿದ ಎತ್ತಿಗೆ ಮನುಷ್ಯರಂತೆ ಹುಟ್ಟುಹಬ್ಬ ಆಚರಿಲಾಗಿದೆ.
ಮನೆಯ ಮುಂಭಾಗದಲ್ಲಿ ರಂಗೋಲಿ ಬಿಡಿಸಿ, ಪೆಂಡಾಲ್ ಹಾಕಿ ಮನುಷ್ಯರ ಜನ್ಮದಿನದ ಆಚರಣೆ ಮಾಡಿದ್ದಾರೆ. ಬಳಿಕ ಎತ್ತಿಗೆ ಶೃಂಗರಿಸಿ ದೇವಸ್ಥಾನಕ್ಕೆ ಕಳಿಸಿ ಜನ್ಮದಿನ ಆಚರಿಸಲಾಗಿದೆ. ಜತೆಗೆ ಈ ಎತ್ತಿಗೆ ಕುಟುಂಬದ ಸದಸ್ಯರು ಮೈಲಾರಿ ಎಂದು ನಾಮಕರಣ ಮಾಡಿದ್ದಾರೆ.
ಒಂದು ಎತ್ತಿನ ಕಥೆ:
2018ರಲ್ಲಿ ಬೆಳೆ ಹಾನಿ, ಮನೆಯಲ್ಲಿ ಕಷ್ಟಗಳ ಸರಮಾಲೆಯಿಂದ ರೈತ ನಾಗಪ್ಪ ಈ ಎತ್ತನ್ನು ಧಾರವಾಡದ ಕೆಲಗೇರಿಯ ರೈತನಿಗೆ ಮಾರಾಟ ಮಾಡಿರುತ್ತಾರೆ. ಆ ರೈತ ಈ ಎತ್ತನ್ನು ಕಟುಕರಿಗೆ ಮಾರಾಟ ಮಾಡಿರುತ್ತಾರೆ. ವಿಪರ್ಯಾಸ ಎಂಬಂತೆ ಮುಂದೊಂದು ದಿನ ಬೇರೆ ಎತ್ತುಗಳ ಖರೀದಿಗೆ ಮಾಲೀಕ ನಾಗಪ್ಪ ಹೋದಾಗ ಈ ಎತ್ತು ಕೂಗಿ ಕೂಗಿ ಕರೆದಿದೆ. ಆಗ ನಾಗಪ್ಪ ಈ ಎತ್ತನ್ನು ಮತ್ತೆ 52 ಸಾವಿರ ರೂ. ಸಾಲ ಮಾಡಿ ಖರೀದಿಸಿ ಮನೆ ತುಂಬಿಸಿಕೊಂಡು ಊರಿನ ಜನಕ್ಕೆ ಊಟ ಹಾಕಿ ಬರ್ತಡೇ ಆಚರಿಸಿದ್ದಾರೆ.
ಮನೆಯ ಏಳ್ಗೆಗಾಗಿ ದುಡಿದ ಎತ್ತುಗಳನ್ನು ಈಗಲೂ ಗ್ರಾಮೀಣ ಭಾಗದಲ್ಲಿ ತಮ್ಮ ಮನೆಯ ಸದಸ್ಯರಂತೆ ಗೌರವಿಸುವ ಸಂಪ್ರದಾಯವಿದೆ. ಇದು ಸುತ್ತಮುತ್ತಲಿನ ಗ್ರಾಮಗಳಲ್ಲಿ ಸಹ ಬಹಳ ಪ್ರಸಿದ್ದಿ ಪಡೆದುಕೊಂಡಿದೆ. ಉತ್ತರ ಕರ್ನಾಟಕದ ಪ್ರಸಿದ್ಧ ಜಾತ್ರೆಗಳಾದ ಉಳವಿ ಚನ್ನಬಸವೇಶ್ವರ ಜಾತ್ರೆ ಹಾಗೂ ಸವದತ್ತಿ ಯಲ್ಲಮ್ಮನ ಜಾತ್ರೆಗೆ ಪ್ರತಿವರ್ಷ ತಪ್ಪದೇ ಎತ್ತಿನ ಬಂಡಿ ಸಜ್ಜಾಗಿರುತ್ತದೆ. ಒಟ್ಟಿನಲ್ಲಿ ತಮ್ಮ ಮನೆಯ ಸದಸ್ಯನಂತೆ ಹಲವು ವರ್ಷಗಳ ಕಾಲ ದುಡಿದ ಎತ್ತಿಗೆ ರೈತ ನಾಗಪ್ಪ ಹುಟ್ಟುಹಬ್ಬ ಆಚರಿಸುವ ಮೂಲಕ ಪ್ರಾಣಿ ಪ್ರೇಮ ಮೆರೆದಿದ್ದಾರೆ.