ಹುಬ್ಬಳ್ಳಿ: ಬೆಂಗಳೂರಿನಿಂದ ಹುಬ್ಬಳ್ಳಿಗೆ ಬಂದಿದ್ದ ಜೋಡಿಯೊಂದು ಆಟೋ ಡ್ರೈವರ್ ಮನೆಯಲ್ಲಿಯೇ ಆತ್ಮಹತ್ಯೆ ಮಾಡಿಕೊಂಡ ಘಟನೆ ಹಳೇ ಮೂರಾರ್ಜಿ ನಗರದಲ್ಲಿ ನಡೆದಿದೆ. ಮೃತರನ್ನು ಬೆಂಗಳೂರು ಮೂಲದ ಲೋಕೇಶ ಹಾಗೂ ಆತನ ನಾದಿನಿ ಶಾಂತಿ ಎಂದು ಗುರುತಿಸಲಾಗಿದೆ. ಆತ್ಮಹತ್ಯೆಗೂ ಮುನ್ನ ಇಬ್ಬರೂ ಮೊಬೈಲ್ನಲ್ಲಿ ಸೆಲ್ಫಿ ವಿಡಿಯೋ ಮೂಲಕ ಮಾತನಾಡಿದ್ದಾರೆ.
ಭಾನುವಾರ ಹುಬ್ಬಳ್ಳಿಗೆ ಬಂದ ಈ ಜೋಡಿ ನಗರದಲ್ಲಿ ಆಟೋವೊಂದನ್ನು ಬಾಡಿಗೆ ಪಡೆದಿದ್ದರು. ಬಳಿಕ ಆಟೋದಲ್ಲೇ ಅಕ್ಷಯ ಪಾರ್ಕ್ ಹಾಗೂ ಇನ್ನಿತರ ಕಡೆ ಸುತ್ತಾಡಿ ಆಟೋ ಡ್ರೈವರ್ ಜೊತೆ ಪರಿಚಯ ಬೆಳೆಸಿಕೊಂಡಿದ್ದರು. ಈ ಜೋಡಿ ಆಟೋ ಚಾಲಕನಿಗೆ ಹೇಳಿ ಊಟವನ್ನು ತರಿಸಿಕೊಂಡಿದ್ದಾರೆ. ಪರಿಚಯವಾಗಿದ್ದರಿಂದ ಆಟೋ ಚಾಲಕ ಆ ಜೋಡಿಯನ್ನು ಮೂರಾರ್ಜಿ ನಗರದಲ್ಲಿನ ತನ್ನ ಮನೆಗೆ ಕರೆದುಕೊಂಡು ಹೋಗಿದ್ದಾನೆ. ನಂತರ ನಮ್ಮ ಮನೆಯಲ್ಲಿಯೇ ಊಟವನ್ನು ಮಾಡಿ ಎಂದು ಇವರಿಬ್ಬರಿಗೂ ಹೇಳಿ ತಾನು ಬೇರೆ ಪ್ಯಾಸೆಂಜರ್‌ನ್ನ ಬಿಡಲು ತೆರಳಿದ್ದಾನೆ.
ಪ್ಯಾಸೆಂಜರ್ ಬಿಟ್ಟು ಮನೆಗೆ ಬಂದು ನೋಡಿದಾಗ ಇಬ್ಬರೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದನ್ನು ಕಂಡ ಆಟೋ ಚಾಲಕ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ಹಳೇ ಹುಬ್ಬಳ್ಳಿ ಠಾಣೆಯ ಪೊಲೀಸರು ಮೃತದೇಹಗಳನ್ನು ಕಿಮ್ಸ್ ಶವಾಗಾರಕ್ಕೆ ರವಾನೆ ಮಾಡಿದ್ದಾರೆ.
ಓದಿ: ಬೆಂಗಳೂರು: ಆಟವಾಡುತ್ತಿದ್ದ ಮಗುವಿನ ಮೇಲೆ ಹರಿದ ಕಾರು, ಆಂತರಿಕ ರಕ್ತಸ್ರಾವದಿಂದ ಮಗು ಸಾವು
ಸೆಲ್ಫಿ ವಿಡಿಯೋದಲ್ಲಿ ಏನಿದೆ?: ಸಾವಿಗೂ ಮುನ್ನ ವಿಡಿಯೋದಲ್ಲಿ ಮಾತನಾಡಿರುವ ಮೃತರು, ನಮ್ಮ ಸಾವಿಗೆ ನಾವೇ ಕಾರಣ. ನಾವು ಮಾಡಿದ ಪಾಪ ಕರ್ಮ ನಮ್ಮ ಸಾವಿಗೆ ಕಾರಣ ಎಂದು ಹೇಳಿಕೊಂಡಿದ್ದಾರೆ. ಆಟೋ ಅಣ್ಣ ಕ್ಷಮಿಸಿ, ನೀವು ನಮ್ಮನ್ನು ನಂಬಿ ಮನೆ ಕೊಟ್ಟಿದ್ರಿ. ನಮ್ಮ ಸಾವಿಗೆ ನಾವೇ ಕಾರಣ. ನಾವು ಆಟೋ ಚಾಲಕರಿಗೆ ಕ್ಷಮೆ ಕೇಳಬೇಕು ನಿಮಗೆ ನಾವು ಮೋಸ ಮಾಡಿದ್ದೇವೆ. ಇದರಲ್ಲಿ ಆಟೋದವರದ್ದು ಏನೂ ತಪ್ಪಿಲ್ಲ. ನಾವೇ ನಂಬಿಕೆ ದ್ರೋಹಿಗಳು ಎಂದು ಲೋಕೇಶ್ ಹೇಳಿದ್ದು, ಸ್ವಾರಿ ಅಣ್ಣ ಎಂದು ಶಾಂತಾ ಕೈಮುಗಿದಿದ್ದಾರೆ.
ಲೋಕೇಶ್ ಹಾಗೂ ಶಾಂತಿ ನಡುವಿನ ಅನೈತಿಕ ಸಂಬಂಧದ ಬಗ್ಗೆ ಆತನ ಪತ್ನಿ ಮಾತನಾಡಿದ್ದಾರೆ. ಲೋಕೇಶ್ ಹಾಗೂ ಸಹೋದರಿ ಶಾಂತಾ ರೆಡ್ ಹ್ಯಾಂಡ್ ಆಗಿ ನನ್ನ ಕೈಗೆ ಸಿಕ್ಕಿಬಿದ್ದಿದ್ದರು. ಅವರಿಬ್ಬರ ನಡುವೆ ಹಲವು ದಿನಗಳಿಂದ ಅನೈತಿಕ ಸಂಬಂಧ ಇತ್ತು. ಇಬ್ಬರೂ ಬೆಂಗಳೂರಿನಿಂದ ಹುಬ್ಬಳ್ಳಿಗೆ ಓಡಿ ಬಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೃತನ ಪತ್ನಿ ಹೇಳಿದರು. ಈ ಬಗ್ಗೆ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಡಿಸಿಪಿ ಪ್ರತಿಕ್ರಿಯೆ: ಈ ಕುರಿತು ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮೀಷನರೇಟ್ ವಿಭಾಗದ ಕಾನೂನು ಸುವವ್ಯಸ್ಥೆ ಡಿಸಿಪಿ ರಾಜೀವ್ ಪ್ರತಿಕ್ರಿಯೆ ನೀಡಿದ್ದು, ''ಈ ಬಗ್ಗೆ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಕುಟುಂಬದವರು ನೀಡುವ ದೂರಿನ ಆಧಾರದ ಮೇಲೆ ತನಿಖೆ ನಡೆಸಲಾಗುತ್ತಿದೆ'' ಎಂದರು.
ಇದನ್ನೂ ಓದಿ : ಆತ್ಮಹತ್ಯೆ ಆಲೋಚನೆಯನ್ನು ರಕ್ತದ ಬಯೋಮಾರ್ಕರ್ ಗುರುತಿಸುತ್ತದೆ: ಅಧ್ಯಯನ)