ಹುಬ್ಬಳ್ಳಿ: ಬಿಜೆಪಿ ಮತ್ತೊಮ್ಮೆ ಹು-ಧಾ ಮಹಾನಗರ ಪಾಲಿಕೆಯಲ್ಲಿ ಅಧಿಕಾರ ಹಿಡಿಯುವುದು ಖಚಿತ. 60ಕ್ಕೂ ಹೆಚ್ಚು ಸ್ಥಾನ ಗಳಿಸಿ ಗೆಲ್ಲುವ ವಿಶ್ವಾಸವಿದೆ ಎಂದು ಮಾಜಿ ಸಚಿವ ಜಗದೀಶ್ ಶೆಟ್ಟರ್ ಹೇಳಿದರು.
ನಗರದಲ್ಲಿಂದು ಪಾಲಿಕೆ ಚುನಾವಣಾ ಪ್ರಚಾರ ಕಚೇರಿ ಉದ್ಘಾಟಿಸಿ ಮಾತನಾಡಿದ ಅವರು, ಬಿಜೆಪಿ ಚುನಾವಣಾ ವಿಚಾರದಲ್ಲಿ ಕ್ರಿಯಾಶೀಲವಾಗಿ ಕೆಲಸ ಕಾರ್ಯ ಮಾಡುತ್ತಿದೆ. ಹಲವಾರು ವಾರ್ಡ್ಗಳಲ್ಲಿ ಪ್ರಚಾರ ಕಾರ್ಯಗಳು ನಡೆಯುತ್ತಿವೆ. ಎರಡು ಬಾರಿ ಆಡಳಿತ ನಡೆಸಿದ್ದೇವೆ. ಆದರೂ 82 ಸೀಟು ಹಂಚಿಕೆ ಸವಾಲಾಗಿತ್ತು. ಅಭ್ಯರ್ಥಿಗಳಲ್ಲಿದ್ದ ಪೈಪೋಟಿ ನಡುವೆಯೂ ಟಿಕೆಟ್ ಹಂಚಲಾಗಿದೆ. ಆದರೂ ಕೆಲವರಲ್ಲಿ ಅಸಮಾಧಾನವಿದೆ. ಸಾಕಷ್ಟು ಕೆಲಸ ಕಾರ್ಯಗಳು ನಡೆಯುತ್ತಿದ್ದು, ಮಾದರಿ ನಗರ ಮಾಡಲು ಬಿಜೆಪಿ ಪಣತೊಟ್ಟಿದೆ ಎಂದರು.
ಬಿಜೆಪಿ ಪದವೀಧರ, ಎಂಕಾಂ, ಎಂಬಿಬಿಎಸ್ ಸೇರಿದಂತೆ ವಿದ್ಯಾವಂತರಿಗೆ ಟಿಕೆಟ್ ನೀಡಿದ್ದು, ಮೂರನೇ ಬಾರಿಗೂ ಬಿಜೆಪಿ ಅಧಿಕಾರಕ್ಕೆ ಬರಲಿದೆ. 60ಕ್ಕೂ ಹೆಚ್ಚು ಸ್ಥಾನ ಗೆಲುವ ವಿಶ್ವಾಸವಿದೆ ಎಂದರು.
ಬಿಜೆಪಿ ನಗರ ಅಧ್ಯಕ್ಷ ಅರವಿಂದ ಬೆಲ್ಲದ ಅವರು ಪಾಲಿಕೆ ಚುನಾವಣಾ ಪ್ರಚಾರದಲ್ಲಿ ಯಾಕೆ ಭಾಗಿಯಾಗುತ್ತಿಲ್ಲ ಎಂಬ ಆರೋಪಕ್ಕೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ ಶೆಟ್ಟರ್, ಪ್ರಶ್ನೆ ಪಾಸ್ ಮಾಡಿ, ಮುಂದೆ ಏನಾದ್ರೂ ಬೇರೆ ಪ್ರಶ್ನೆ ಇದ್ರೆ ಕೇಳಿ ಎಂದು ಹೇಳುವ ಮೂಲಕ ಬೆಲ್ಲದ ಅನುಪಸ್ಥಿತಿಗೆ ಪರೋಕ್ಷವಾಗಿ ತಿರುಗೇಟು ನೀಡಿದರು.
ಬಂಡಾಯ ಅಭ್ಯರ್ಥಿಗಳ ವಿರುದ್ಧ ಶಿಸ್ತು ಕ್ರಮ ಖಚಿತ:
ಮನವೊಲಿಕೆ ಮಾಡಿದ್ದರೂ ಸಹ ಕೆಲವರು ಬಂಡಾಯ ಅಭ್ಯರ್ಥಿಗಳಾಗಿ ಕಣದಲ್ಲಿದ್ದಾರೆ. ಅವರ ವಿರುದ್ಧ ಪಕ್ಷ ಶಿಸ್ತು ಕ್ರಮ ಕೈಗೊಳ್ಳಲಿದೆ. ಬಂಡಾಯ ಅಭ್ಯರ್ಥಿಗಳಿಂದ ನಮಗೆ ಹೊಡೆತ ಬೀಳುವುದಿಲ್ಲ. ಜನರು ಪಕ್ಷ ನೋಡಿ ಮತ ಹಾಕುತ್ತಾರೆ. ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ ಎಂದರು.