ಧಾರವಾಡ : ಸೋಂಕಿತರಿಗೆ ಸಕಾಲದಲ್ಲಿ ನೆರವಾಗಲು ಮತ್ತು ಅಗತ್ಯವಿರುವ ಮಾಹಿತಿ ಪೂರೈಸಿ ಆಸ್ಪತ್ರೆಗಳ ಜತೆಗೆ ಸಮನ್ವಯ ಸಾಧಿಸುವ, ಚಿಕಿತ್ಸೆಗೆ ಸಂಬಂಧಿಸಿದಂತೆ ಸಂಪೂರ್ಣ ಮಾಹಿತಿ ಪೂರೈಸಲು ಧಾರವಾಡ ಜಿಲ್ಲಾಡಳಿತ ತನ್ನ ಕಚೇರಿ ಆವರಣದಲ್ಲಿ ಕೋವಿಡ್ ವಾರ್ ರೂಮ್ ತೆರೆದಿದೆ.
ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಹಾಗೂ ಶಾಸಕ ಅರವಿಂದ ಬೆಲ್ಲದ್ ಅವರು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರೊಂದಿಗೆ ಭೇಟಿ ನೀಡಿ ವಾರ್ ರೂಮ್ ಕಾರ್ಯದ ಬಗ್ಗೆ ಮಾಹಿತಿ ಪಡೆದು ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಮಾತನಾಡಿ, ಜಿಲ್ಲೆಯ ಯಾವುದೇ ಭಾಗದಿಂದ ಕೋವಿಡ್ ಸೋಂಕಿತರು ಅಥವಾ ಅವರ ಕುಟುಂಬಸ್ಥರು ಚಿಕಿತ್ಸೆ ಕುರಿತು ಮಾಹಿತಿ ಕೇಳಿದರೆ ತಕ್ಷಣ ಪೂರೈಸಲು ಮತ್ತು ಆಸ್ಪತ್ರೆಗಳೊಂದಿಗೆ ಸಮನ್ವಯ ಸಾಧಿಸಿ ಅಗತ್ಯವಿರುವ ಬೆಡ್‍ವ್ಯವಸ್ಥೆ ಮಾಡಲು ಈ ವಾರ್ ರೂಮ್‌ನಿಂದ ಕೆಲಸ ಮಾಡಲಾಗುತ್ತಿದೆ.
ಹುಬ್ಬಳ್ಳಿಯ ದೇಶಪಾಂಡೆ ಫೌಂಡೇಶನ್ ಆವರಣದಲ್ಲಿ ಸಹಾಯವಾಣಿಯನ್ನು ಆರಂಭಿಸಲಾಗಿದೆ. ಆರೋಗ್ಯ ಇಲಾಖೆಯ ಸಿಬ್ಬಂದಿಯನ್ನು ನೇಮಿಸಿ ಕರೆ ಮಾಡುವ ಸೋಂಕಿತ ಅಥವಾ ಸೋಂಕಿತನ ಕುಟುಂಬದ ಸದಸ್ಯರಿಗೆ ಆಪ್ತ ಸಮಾಲೋಚನೆ ಮಾಡಿ ಅಗತ್ಯ ನೆರವು, ಮಾರ್ಗದರ್ಶನ, ಸಲಹೆ ನೀಡಿ ಧೈರ್ಯ ನೀಡಲಾಗುತ್ತಿದೆ ಎಂದು ಹೇಳಿದರು.
ಕೋವಿಡ್ ವಾರ್ ರೂಮ್ ಮೇಲ್ವಿಚಾರಕರಾಗಿರುವ ಉಪವಿಭಾಗಾಧಿಕಾರಿ ಡಾ.ಗೋಪಾಲಕೃಷ್ಣ ಬಿ. ಮಾತನಾಡಿ, ವಿವಿಧ ಇಲಾಖೆಯ ಸುಮಾರು 12 ಸಿಬ್ಬಂದಿ ವಾರ್ ರೂಮ್‍ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಜಿಲ್ಲೆಯ ಕೋವಿಡ್ ಚಿಕಿತ್ಸೆಗೆ ಲಭ್ಯವಿರುವ ಆಸ್ಪತ್ರೆ, ಬೆಡ್, ಆಕ್ಸಿಜನ್ ಬೆಡ್, ವೆಂಟಿಲೇಟರ್, ಹೋಂ ಐಸೋಲೇಷನ್‍ನಲ್ಲಿರುವವರಿಗೆ ಅಗತ್ಯ ಚಿಕಿತ್ಸಾ ಮಾಹಿತಿ, ಔಷಧ ಇತ್ಯಾದಿಗಳ ಕುರಿತು ಮಾಹಿತಿ ನೀಡಲಾಗುತ್ತಿದೆ.
ವಾರ್ ರೂಮ್‍ನಲ್ಲಿ ಜಿಲ್ಲೆಯಲ್ಲಿ ಕೋವಿಡ್ ಸೋಂಕನ್ನು ನಿಯಂತ್ರಿಸಲು ಅಗತ್ಯವಿರುವ ತಂಡಗಳನ್ನು ರಚಿಸಿ, ನೋಡಲ್ ಅಧಿಕಾರಿಗಳನ್ನು ನೇಮಿಸಿ ಜಿಲ್ಲಾಧಿಕಾರಿಗಳು ಕಾಲಕಾಲಕ್ಕೆ ಹೊರಡಿಸುವ ಆದೇಶಗಳನ್ನು ಹೊಂದಲಾಗಿದೆ. ಸೋಂಕಿತರಿಗೆ ಅಗತ್ಯವಿರುವ ಎಲ್ಲ ರೀತಿಯ ಮಾಹಿತಿ, ನೆರವಿನೊಂದಿಗೆ ಆಪ್ತತೆ ಮೂಡುವಂತೆ ಕ್ರಮ ವಹಿಸಲಾಗುತ್ತಿದೆ ಎಂದು ಹೇಳಿದರು.