ಹುಬ್ಬಳ್ಳಿ: ಸತತ ಮೂರನೇ ಬಾರಿಗೆ ಹುಬ್ಬಳ್ಳಿ - ಧಾರವಾಡ ಮಹಾನಗರ ಪಾಲಿಕೆ ಅಧಿಕಾರ ಬಿಜೆಪಿ ಪಾಲಾಗಿದೆ. ನೂತನ ಮೇಯರ್ ಆಗಿ ಈರೇಶ ಅಂಚಟಗೇರಿ ಹಾಗೂ ಉಪಮೇಯರ್ ಆಗಿ ಉಮಾ ಮುಕುಂದ್ ಆಯ್ಕೆಯಾಗಿದ್ದಾರೆ.ಮೇಯರ್ ಮತ್ತು ಉಪ ಮೇಯರ್ ಆಯ್ಕೆಗೆ ಇಂದು ಮಹಾನಗರ ಪಾಲಿಕೆಯಲ್ಲಿ ಕೈ ಎತ್ತುವ ಮೂಲಕ ಮತದಾನ ಪ್ರಕ್ರಿಯೆ ನಡೆದಿದೆ. ಮತದಾನದಲ್ಲಿ ಪಾಲಿಕೆಯ ಸದಸ್ಯರು, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಶಾಸಕ ಜಗದೀಶ್ ಶೆಟ್ಟರ್ ಸೇರಿದಂತೆ ಪಾಲಿಕೆಯ ವ್ಯಾಪ್ತಿಯ ಜನಪ್ರತಿನಿಧಿಗಳು ಭಾಗವಹಿಸಿದ್ದರು.
ಆಡಳಿತಾಧಿಕಾರಿಯಾದ ಬೆಳಗಾವಿ ಪ್ರಾದೇಶಿಕ ಆಯುಕ್ತ ಆಮ್ಲಾನ್ ಆದಿತ್ಯ ಬಿಸ್ವಾಸ್ ನೇತೃತ್ವದಲ್ಲಿ ಚುನಾವಣೆ ಪ್ರಕ್ರಿಯೆ ನಡೆಯಿತು. ಸದಸ್ಯರು ತಮ್ಮ ಪಕ್ಷದ ಮೇಯರ್ ಹಾಗೂ ಉಪಮೇಯರ್ ಅಭ್ಯರ್ಥಿಗಳ ಪರ ಕೈ ಮತ್ತು ಸಹಿ ಮಾಡುವ ಮೂಲಕ ಬೆಂಬಲ ಸೂಚನೆ ಮಾಡಿದರು. ಬಳಿಕ ಚುನಾವಣೆ ಪ್ರಕ್ರಿಯೆಯಂತೆ ಆಯಾ ಪಕ್ಷಗಳ ಎಲ್ಲ ಸದಸ್ಯರ ಹೆಸರು ನೋಂದಾಯಿಸಿಕೊಂಡರು.
ಅಂತಿಮವಾಗಿ ವಾರ್ಡ್ ನಂಬರ್ 3ರ ಸದಸ್ಯರಾದ ಬಿಜೆಪಿ ಮೇಯರ್ ಅಭ್ಯರ್ಥಿ ಈರೇಶ ಅಂಚಟಗೇರಿ ಪರವಾಗಿ 50 ಮತಗಳು, ವಿರುದ್ದವಾಗಿ 30 ಮತಗಳು ಬಿದ್ದರೆ, ಮೂವರು ತಟಸ್ಥವಾಗಿ ಉಳಿದರು. ಕಾಂಗ್ರೆಸ್ ಮೇಯರ್ ಅಭ್ಯರ್ಥಿ ಮಯೂರ ಮೊರೆ ಪರ 35, ವಿರುದ್ಧ 51 ಮತಗಳು ಬಿದ್ದು, ತಟಸ್ಥವಾಗಿ ಮೂವರು ಇದ್ದರು. ಎಐಎಂಐಎಂ ಪಕ್ಷದಿಂದ ಮೇಯರ್ ಸ್ಥಾನಕ್ಕೆ ಸ್ಪರ್ಧಿಸಿದ್ದ ನಜೀರ್ ಅಹ್ಮದ್ ಹೊನ್ಯಾಳ ಪರವಾಗಿ 3 ಮತ, ವಿರುದ್ಧವಾಗಿ 83 ಮತಗಳು ಹಾಗೂ ತಟಸ್ಥವಾಗಿ ಮೂವರು ಉಳಿದರು.
ಇತ್ತ, ಉಪಮೇಯರ್ ಆಯ್ಕೆ ಕೂಡ ಕೈ ಎತ್ತಿ ಮತ್ತು ಸಹಿ ಮಾಡುವ ಮೂಲಕ ನಡೆಯಿತು. ವಾರ್ಡ್ ನಂಬರ್ 44ರ ಸದಸ್ಯರಾದ ಬಿಜೆಪಿ ಉಪಮೇಯರ್ ಅಭ್ಯರ್ಥಿ ಉಮಾ ಮುಕುಂದ್ ಪರವಾಗಿ 51 ಮತಗಳು, ವಿರುದ್ಧವಾಗಿ 35 ಮತಗಳು ಹಾಗೂ ತಟಸ್ಥವಾಗಿ 3 ಮತಗಳ ಚಲಾವಣೆಯಾದವು. ಕಾಂಗ್ರೆಸ್ ಉಪಮೇಯರ್ ಅಭ್ಯರ್ಥಿ ದೀಪಾ ಸಂತೋಷ ಪರವಾಗಿ 35 ಮತಗಳು ಹಾಗೂ ವಿರುದ್ಧವಾಗಿ 51 ಮತಗಳು ಬಿದ್ದರೆ, ತಟಸ್ಥವಾಗಿ 3 ಮತಗಳು ಇದ್ದವು.
ಇದನ್ನೂ ಓದಿ: ಹು-ಧಾ ಪಾಲಿಕೆ ಚುನಾವಣೆ: ಮೇಯರ್-ಉಪಮೇಯರ್ ಸ್ಥಾನಕ್ಕೆ ಸಚಿವ ಜೋಶಿ ಬೆಂಬಲಿಗರಿಗೆ ಮಣೆ